ಜಿಲ್ಲೆ

ಇಬ್ಬರ ಆಟೋ ಚಾಲಕರಿಗೆ ಜೀವಾವಧಿ ಶಿಕ್ಷೆ; ಅಕ್ಕಿಆಲೂರಲ್ಲಿ ಪಾಳೆ ವಿಚಾರವಾಗಿ ನಡೆದಿದ್ದ ಕೊಲೆ ಪ್ರಕರಣ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಬಸ್ ನಿಲ್ದಾಣದಲ್ಲಿ ಆಟೋರಿಕ್ಷಾ ಪಾಳೆಯ ವಿಚಾರವಾಗಿ ದೈಹಿಕ ಹಲ್ಲೆ ನಡೆಸಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಅಕ್ಕಿಆಲೂರಿನ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಬುಧವಾರ ತೀರ್ಪು ನೀಡಿದ್ದಾರೆ.
ಅಕ್ಕಿಆಲೂರಿನ ಆಟೋ ಚಾಲಕರಾದ ಅಶೋಕ ಹನುಮಂತಪ್ಪ ಶೇಷಗಿರಿ ಹಾಗೂ ಅಭಿಲಾಷ ಅಶೋಕ ಶೇಷಗಿರಿ ಶಿಕ್ಷೆಗೀಡಾದವರು.
ಆಟೋ ಚಾಲಕ ವೆಂಕಟೇಶ ನಿಂಗಪ್ಪ ಆಡೂರ (55) ಎಂಬುವರು 2022ರ ಆಗಸ್ಟ್ 10ರಂದು ಸಂಜೆ ಅಕ್ಕಿಆಲೂರ ಬಸ್ ನಿಲ್ದಾಣದಲ್ಲಿ ಆಟೋರಿಕ್ಷಾ ಪಾಳೆಯದಲ್ಲಿ ನಿಲ್ಲಿಸಿದ್ದರು. ಆಗ ಆರೋಪಿತರು ವೆಂಕಟೇಶ ಪಾಳೆಯ ವಿಚಾರವಾಗಿ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿ ಕೊಲೆ ಮಾಡಿದ್ದರು ಎಂದು ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಕುರಿತು ಅಂದಿನ ತನಿಖಾಧಿಕಾರಿ ಹಾಗೂ ಶಿಗ್ಗಾಂವಿ ಡಿಎಸ್‌ಪಿ ಒ.ಬಿ.ಕಲ್ಲೇಶಪ್ಪ ಹಾಗೂ ಮಂಜುನಾಥ ಎಚ್.ಜಿ. ತನಿಖೆ ಕೈಗೊಂಡು, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿತರ ಮೇಲಿನ ಆಪಾದನೆಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 33 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ವಾದ ಮಂಡಿಸಿದ್ದರು.