ಹಾವೇರಿ: ದೇವಾನಾಂ ಪ್ರಿಯದರ್ಶಿ ಅಶೋಕ ಚಕ್ರವರ್ತಿ ಟ್ರಸ್ಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಣ ತೊಡಗಿಸಿ ಎಐಟಿಯುಸಿ ರಾಜ್ಯ ನಾಯಕರು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಕುರಿತು ದಾಖಲೆಗಳ ಸಹಿತ ಬಹಿರಂಗ ಚರ್ಚೆಗೆ ಸಿದ್ಧವಿದ್ದು, ಕೂಡಲೇ ಆ ಹಣವನ್ನು ಮರಳಿಸುವಂತೆ ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಎಐಟಿಯುಸಿ ಸಂಘಟನೆಗೆ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಬಿಸಿಯೂಟದ ಸಿಬ್ಬಂದಿ ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗಳ ನಿವಾರಣೆಯ ಉದ್ದೇಶದಿಂದ ಆರಂಭವಾದ ಎಐಟಿಯುಸಿ ಸಂಘಟನೆಯಲ್ಲಿ ಕಳೆದ 35 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ನನ್ನ ಉಚ್ಛಾಟನೆಗೆ ಲೆಕ್ಕಪತ್ರಗಳು ಕಾರಣವಲ್ಲ. ಸಂಘಟನೆಯ ಕೆಲ ರಾಜ್ಯ ನಾಯಕರು ದೇವಾನಾಂ ಪ್ರಿಯದರ್ಶಿ ಅಶೋಕ ಚಕ್ರವರ್ತಿ ಟ್ರಸ್ಟ್ ಹೆಸರಿನಲ್ಲಿ ರಾಜ್ಯಾದ್ಯಂತ 18,000 ವೇತನ ಹೆಚ್ಚಿಸುವ ಹೆಸರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ 2.80 ಕೋಟಿಗೂ ಹೆಚ್ಚಿನ ಹಣ ಸಂಗ್ರಹಿಸಿದ್ದಾರೆ. ಇದಕ್ಕೆ ಹಾವೇರಿ ಜಿಲ್ಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನನ್ನನ್ನು ಉಚ್ಛಾಟಿಸಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಕಾನೂನು ಹೋರಾಟಕ್ಕೆ ಮುಂದಾಗಲಿದ್ದೇವೆ. ಇದೇ ರೀತಿಯಲ್ಲಿ ಪ್ರತಿ ಜಿಲ್ಲೆಗಳಲ್ಲೂ ಹಣದ ದುರುಪಯೋಗ ನಡೆದಿದೆ. ಆಯಾ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಜಾಗೃತಿಗೊಳಿಸುತ್ತಿದ್ದು, 11 ಜಿಲ್ಲೆಗಳ ಕಾರ್ಯಕರ್ತರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಶೀಲವಂತರ, ವಾಸು ಆವರಗೆರೆ, ವಿಶಾಲಾಕ್ಷಮ್ಮ, ಶಾರದಮ್ಮ, ಕಾಳಮ್ಮ ಸಿ.ಬಿ., ರೇಖಮ್ಮ ಧನ್ನೂರ, ಮಂಜುಳಾ ಕಳಸೂರ, ಮಹಾದೇವಕ್ಕ ಹಿರೇಮಠ, ಜಿ.ಡಿ ಪೂಜಾರ, ಇತರರಿದ್ದರು.