ಜಿಲ್ಲೆ

ಹಳ್ಳದ ನೀರು ನುಗ್ಗಿ ಹೆಸರು, ಮೆಣಸಿನಕಾಯಿ ಬೆಳೆಹಾನಿ; ರೈತರ ಕಷ್ಟ ಆಲಿಸದ ಹಾವೇರಿ ತಾಲೂಕು ಕೃಷಿ ಅಧಿಕಾರಿಗಳು

ಹಾವೇರಿ: ಸತತ ಮಳೆಯಿಂದಾಗಿ ಹಳ್ಳದ ನೀರು ಹೊಲಗಳಿಗೆ ನುಗ್ಗಿದ ಪರಿಣಾಮ ಇಲ್ಲಿನ ಜಿಎಚ್ ಕಾಲೇಜ್ ಹಿಂಭಾಗ ದೇವಗಿರಿ ರೋಡ್ ಬಳಿ ಹಲವು ರೈತರ ಜಮೀನುಗಳಲ್ಲಿ ಬೆಳೆದಿದ್ದ ಉದ್ದು, ಹೆಸರುಕಾಳು, ಮೆಣಸಿನಕಾಯಿ. ಹತ್ತಿ ಬೆಳೆ ಹಾನಿಗೀಡಾಗಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಕೃಷಿ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ.
ಜಿಎಚ್ ಕಾಲೇಜ್ ಹಿಂಭಾಗದಲ್ಲಿ ಹರಿದಿರುವ ಹಳ್ಳದ ನೀರು, ಪುಣೆ- ಬೆಂಗಳೂರು ಬೈಪಾಸ್ ಮಾರ್ಗವಾಗಿ ಹಳ್ಳದ ಮೂಲಕ ಸಾಗುವ ನೀರು ನಾಗನೂರು ಕೆರೆ, ವರದಾ ನದಿಗೆ ಸೇರುತ್ತದೆ. ಈ ವೇಳೆ ಹಳ್ಳದ ನೀರು ಹೊಲಗಳಿಗೆ ನುಗ್ಗಿದೆ. ಇದರಿಂದಾಗಿ ಈ ಭಾಗದ ನೂರಾರು ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಉದ್ದು, ಮೆಣಸಿನಕಾಯಿ, ಹೆಸರು ಕಾಳು, ಹತ್ತಿ ಗಿಡಗಳು ಕೊಳೆತು ಹೋಗಿವೆ.
ನಮ್ಮ ಜಮೀನಿಗೂ ಹಳ್ಳದ ನೀರು ನುಗ್ಗಿದ್ದರಿಂದ ಉದ್ದು, ಮೆಣಸಿನಕಾಯಿ ಹಾಗೂ ಹೆಸರುಕಾಳು ಬೆಳೆ ಹಾನಿಗೀಡಾಗಿದೆ. ಹತ್ತಿ ಬೆಳೆಗೂ ಕಂಟಕ ಎದುರಾಗಿದೆ. ಇಷ್ಟೆಲ್ಲ ಅನಾಹುತ ಸಂಭವಿಸಿದ್ದರೂ ತಾಲೂಕಿನ ಕೃಷಿ ಅಧಿಕಾರಿಗಳು ಯಾರೂ ನಮ್ಮ ಸಂಕಷ್ಟ ಕೇಳುತ್ತಿಲ್ಲ. ಪರಿಹಾರ ನೀಡುತ್ತಿಲ್ಲ ಎಂದು ರೈತ ಶಿವಾನಂದ ವಾರ್ತಿ ಅಳಲು ತೋಡಿಕೊಂಡರು.