ಹಾವೇರಿ: ಕೃಷಿ ಇಲಾಖೆಯ ಕೃಷಿ ಸಂಸ್ಕರಣೆ ಹಾಗೂ ಆಹಾರ ಭದ್ರತಾ ಅಭಿಯಾನ ಯೋಜನೆಗಳಡಿ ರಿಯಾಯ್ತಿ ದರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ತಾಡಪತ್ರಿ ಸೌಲಭ್ಯಕ್ಕೆ ತಾಲೂಕಿನ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದಿನ ಮೂರು ವರ್ಷಗಳಲ್ಲಿ ತಾಡಪತ್ರಿಗಳನ್ನು ಪಡೆಯದ ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಏ.17ರಂದು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ರೈತ ಫಲಾನುಭವಿಗಳಿಗೆ ಏ.18ರಿಂದ ಏ.26ರವರೆಗೆ ಹಂಚಿಕೆ ಮಾಡಲಾಗವುದು.
ತಾಡಪತ್ರಿಗಳನ್ನು ಪಡೆಯಲಿಚ್ಛಿಸುವ ರೈತರು ಆಧಾರ್ ಕಾರ್ಡ್, ಜಮೀನಿನ ಉತಾರ, ಆರ್.ಡಿ. ನಂಬರ್ ಹೊಂದಿದ ಚಾಲ್ತಿ ಜಾತಿ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಏ.15ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಹಾವೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.