ಜಿಲ್ಲೆ

ಬಿತ್ತನೆಬೀಜ, ರಸಗೊಬ್ಬರ ವಿತರಣೆಗೆ ಸೂಚನೆ; ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಮಾಹಿತಿ

ಹಾವೇರಿ: ಪ್ರಸಕ್ತ ಮುಂಗಾರಿನಲ್ಲಿ ಹಾವೇರಿ ತಾಲೂಕಿನಲ್ಲಿ ಈವರೆಗೆ 51.2 ಮಿ.ಮಿ ಮಳೆಯಾಗಿದ್ದು, ರೈತರು ಭೂಮಿ ಸಿದ್ಧತೆ ಕಾರ್ಯ ನಡೆಸಿದ್ದಾರೆ. ಹಾಗಾಗಿ, ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ವಿತರಣೆ ಮಾಡಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದರು.

ನಗರದ ತಾಲೂಕು ಕೃಷಿ ಇಲಾಖೆ ಕಚೇರಿಯಲ್ಲಿ ಇತ್ತೀಚೆಗೆ ತಾಲೂಕಿನ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರ ಸಭೆ ನಡೆಸಿದ ಅವರು, ತಾಲೂಕಿನಲ್ಲಿ ಮುಸುಕಿನ ಜೋಳ, ಸೊಯಾಅವರೆ, ಶೇಂಗಾ, ಕಬ್ಬು ಹಾಗೂ ಭತ್ತ ಪ್ರಮುಖ ಬೆಳೆಗಳಾಗಿದ್ದು, ರೈತರಿಗೆ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ಪರವಾನಿಗೆ ಹೊಂದಿರುವ ರಸಗೊಬ್ಬರ ಮಾರಾಟ ಡೀಲರ್‌ಗಳಿಗೆ ವಿವಿಧ ರಸಗೊಬ್ಬರಗಳ ದಾಸ್ತಾನು ಹಾಗೂ ಯಾವುದೇ ಲೋಪವಾಗದಂತೆ ಮಾರಾಟ ಮಾಡಲು ಸೂಚನೆ ನೀಡಲಾಯಿತು. ರೈತರು ಅಧಿಕೃತ ಪರವಾನಿಗೆ ಹೊಂದಿದ ರಸಗೊಬ್ಬ ಮಾರಾಟಗಾರರಿಂದ ಖರೀದಿಸಬಹುದು. ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಉಪಕರಣದ ಮೂಲಕ ರಸಗೊಬ್ಬರಗಳನ್ನು ಖರೀದಿಸಬಹುದು. ರೈತರು ಕೇವಲ ಒಂದೇ ಬಗೆಯ ರಸಗೊಬ್ಬರಕ್ಕೆ ಅವಲಂಬಿತರಾಗದೇ ಗಂಧಕ ಹಾಗೂ ಪೊಟ್ಯಾಷ್ ಅಂಶಗಳಿರುವ 20:20:0:13 10:26:26 ಹಾಗೂ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸುವುದರಿಂದ ಪೋಷಕಾಂಶಗಳ ಸಮಗ್ರ ನಿರ್ವಹಣೆ ಸಾಧ್ಯ ಎಂದು ತಿಳಿಸಿದರು.

ಜಿಲ್ಲೆಯ ವಿಚಕ್ಷಣಾ ದಳದ ಸಹಾಯಕ ಕೃಷಿ ನಿರ್ದೇಶಕ ಶಿವಲಿಂಗಪ್ಪ ವಿ.ಕೆ. ಮಾತನಾಡಿ, ರಸಗೊಬ್ಬರ ಮಾರಾಗಾರರು ಕಡ್ಡಾಯವಾಗಿ ದಾಸ್ತಾನು ಹಾಗೂ ದರಪಟ್ಟಿಯನ್ನು ಪ್ರದರ್ಶಿಸಬೇಕು. ರೈತರಿಗೆ ರಸೀದಿ ನೀಡಬೇಕು ಹಾಗೂ ಇನ್ನಿತರೆ ದಾಖಲಾತಿಗಳನ್ನು ನಿರ್ವಹಿಸುವ ಕುರಿತು ಮಾರಾಟಗಾರರಿಗೆ ಸೂಚಿಸಿದರು.

ವಿಚಕ್ಷಣಾ ದಳದ ಸಹಾಯಕ ಕೃಷಿ ನಿರ್ದೇಶಕ ಬಿ.ವಿ ಶ್ರೀನಿವಾಸಲು ರಸಗೊಬ್ಬರ ನಿಯಂತ್ರಣ ಕಾಯ್ದೆ ಬೀಜ ಮತ್ತು ಕೀಟನಾಶಕಗಳ ಕಾಯ್ದೆಗಳ ಬಗ್ಗೆ ಉಪನ್ಯಾಸ ನೀಡಿದರು. ನಂತರ ಸಮಗ್ರ ರಸಗೊಬ್ಬರ ಬಳಕೆ ಕುರಿತು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ತಾಲೂಕಿನ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಎಸ್ ಕಾಮಣ್ಣವರ, ಉಪಾಧ್ಯಕ್ಷ ರುದ್ರಪ್ಪ ಹಾದಿಮನಿ, ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ರುದ್ರಪ್ಪ ಶಿವಪ್ಪ ಜಾಲಿ, ತಾಲೂಕು ತಾಂತ್ರಿಕ ಅಧಿಕಾರಿ ಧನಂಜಯ ನಾಗಣ್ಣನವರ, ತಾಲೂಕಿನ ಪರವಾನಿಗೆ ಹೊಂದಿದ ವಿವಿಧ ಕೃಷಿ ಪರಿಕರ ಮಾರಾಟಗಾರರು ಮತ್ತು ಕೃಷಿ ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.