ಜಿಲ್ಲೆ

ರೈತರಿಂದ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹಾವೇರಿ: ಕೃಷಿ ಇಲಾಖೆಯಿಂದ ಜಿಲ್ಲೆಯ ರೈತರಿಂದ 2023-24ನೇ ಸಾಲಿನ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ವಿವಿಧ ಹಂತಗಳಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಪರ್ಧೆ ನಡೆಸಿ, ಪ್ರತಿ ಬೆಳೆಗೂ ಮೂರು ಬಹುಮಾನಗಳನ್ನು ನೀಡಲಾಗುತ್ತದೆ. ರೈತರು ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳಬೇಕು. ಅರ್ಜಿಯೊಂದಿಗೆ ಕಂದಾಯ ಇಲಾಖೆಯ ದಾಖಲೆ ಪ್ರಕಾರ ಜಮೀನು (ಖಾತೆ) ಹೊಂದಿರುವ ಹಾಗೂ ಸ್ವತಃ ಬೇಸಾಯದಲ್ಲಿ ತೊಡಗಿರುವ (ಮಾಡುತ್ತಿರುವ) ಸ್ವಯಂ ಕ್ರಿಯಾಶೀಲ ಕೃಷಿಕರಾಗಿದ್ದು, ಪಹಣಿ ಪತ್ರಿಕೆ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಅಥವಾ ಸಾಮಾನ್ಯ ವ್ಯವಹಾರಿಕ ಅಧಿಕಾರ(ಜಿ.ಪಿ.ಎ) ಹೊಂದಿದ್ದ ಪಕ್ಷದಲ್ಲಿ (ಭೂ ಸುಧಾರಣಾ ಕಾಯ್ದೆಗೆ ಒಳಪಟ್ಟು) ದಾಖಲೆಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿ ಬೆಳೆಗೂ ಪ್ರವೇಶ ಶುಲ್ಕ ಪಾವತಿಸಬೇಕಾಗಿರುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು 25 ರೂ. ಹಾಗೂ ಸಾಮಾನ್ಯ ವರ್ಗದವರು 100 ರೂ. ಶುಲ್ಕ ಪಾವತಿಸಬೇಕು.
ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಭತ್ತ (ಮುಂಗಾರು ಮಳೆಯಾಶ್ರಿತ ಹಾಗೂ ನೀರಾವರಿ), ರಾಗಿ ಮುಂಗಾರು (ಮಳೆಯಾಶ್ರಿತ), ಜೋಳ ಹಿಂಗಾರು (ಮಳೆಯಾಶ್ರಿತ), ಶೇಂಗಾ ಮುಂಗಾರು (ಮಳೆಯಾಶ್ರಿತ), ತೊಗರಿ ಮುಂಗಾರು (ಮಳೆಯಾಶ್ರಿತ), ಕಡಲೆ ಹಿಂಗಾರು (ಮಳೆಯಾಶ್ರಿತ), ಸೋಯಾ ಅವರೆ ಮುಂಗಾರು (ಮಳೆಯಾಶ್ರಿತ), ಮುಸುಕಿನ ಜೋಳ ಮುಂಗಾರು (ಮಳೆಯಾಶ್ರಿತ), ನವಣೆ ಮುಂಗಾರು (ಮಳೆಯಾಶ್ರಿತ), ಸಜ್ಜೆ ಮುಂಗಾರು (ಮಳೆಯಾಶ್ರಿತ) 11 ಬೆಳೆಗಳನ್ನು ನಿಗದಿಪಡಿಸಲಾಗಿದೆ.
ಜಿಲ್ಲಾ ಮಟ್ಟದ ಬೆಳೆ ಸ್ಪರ್ಧೆಗೆ ಮುಸುಕಿನ ಜೋಳ (ಮಳೆಯಾಶ್ರಿತ)ವನ್ನು ನಿಗದಿಪಡಿಸಲಾಗಿದೆ. ತಾಲೂಕು ಮಟ್ಟದ ಸ್ಪರ್ಧೆಗೆ ಹಾವೇರಿಗೆ ತಾಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ಹಾನಗಲ್ಲ ತಾಲೂಕಿಗೆ ಭತ್ತ (ನೀರಾವರಿ), ಸವಣೂರ ತಾಲೂಕಿಗೆ ಶೇಂಗಾ (ಮಳೆಯಾಶ್ರಿತ), ಶಿಗ್ಗಾಂವಿ ತಾಲೂಕಿಗೆ ಶೇಂಗಾ (ಮಳೆಯಾಶ್ರಿತ), ಬ್ಯಾಡಗಿ ತಾಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ಹಿರೇಕೆರೂರ ತಾಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ರಾಣೆಬೆನ್ನೂರ ಮುಸುಕಿನ ಜೋಳ (ಮಳೆಯಾಶ್ರಿತ) ನಿಗದಿಪಡಿಸಲಾಗಿದೆ.
ರಾಜ್ಯ ಮಟ್ಟದ ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ 40 ಸಾವಿರ ರೂ. ಹಾಗೂ ತೃತೀಯ ಬಹುಮಾನ 35 ಸಾವಿರ ರೂ., ಜಿಲ್ಲಾ ಮಟ್ಟದ ಪ್ರಥಮ ಬಹುಮಾನ 30 ಸಾವಿರ ರೂ., ದ್ವಿತೀಯ 25 ಸಾವಿರ ರೂ. ಹಾಗೂ ತೃತೀಯ ಬಹುಮಾನ 20 ಸಾವಿರ ರೂ. ಹಾಗೂ ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ನಿಗಧಿಪಡಿಸಲಾಗಿದೆ.
ಅರ್ಜಿಗಳನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ್ಲ ಪಡೆದುಕೊಂಡು ಅಲ್ಲಿಯೇ ಸಲ್ಲಿಸಬೇಕು. ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಲು ಮುಂಗಾರು ಹಂಗಾಮಿಗೆ ಆ.31 ಕೊನೆಯ ದಿನಾಂಕವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.