ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬೆಳೆಗಳು ಬಾಡುತ್ತಿದ್ದು, ಮಧ್ಯಂತರ ಪರಿಹಾರ ನೀಡಲು ಅವಶ್ಯಕವಿರುವ ಗ್ರೌಂಡ್ ಟ್ರುಥಿಂಗ್ ಜಂಟಿ ಸಮೀಕ್ಷೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮಧ್ಯಂತರ ಪರಿಹಾರ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಳೆಯಿಂದಲೇ ಸಮೀಕ್ಷೆ ಆರಂಭಿಸಲಾಗುವುದು. ಮುಂದಿನ ಎಂಟು ದಿನಗಳಲ್ಲಿ ವರದಿ ನೀಡಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಯ ಹಾಗೂ ವಿಮಾ ಸಂಸ್ಥೆಯ ಪ್ರತಿನಿಧಿಗಳು ಜಂಟಿಯಾಗಿ ಬೆಳೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದರು. ಮುಂಗಾರು ಹಂಗಾಮಿನ ಮಳೆಯಾಶ್ರಿತ ಬೆಳೆ ಹಾನಿ ಕುರಿತಂತೆ ಸಮೀಕ್ಷೆ ಕೈಗೊಳ್ಳಲು ತಿಳಿಸಿದರು.
ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪ ನಿರ್ದೇಶಕ ಎಚ್.ಹುಲಿರಾಜ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರವೀಂದ್ರಗೌಡ ಪಾಟೀಲ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಮಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ರೈತ ಪ್ರತಿನಿಧಿಗಳು, ಉಪಸ್ಥಿತರಿದ್ದರು.