ಜಿಲ್ಲೆ

ಯೂರಿಯಾ ಬದಲು ಪರ್ಯಾಯವಾಗಿ ನ್ಯಾನೊ ಡಿಎಪಿ ಬಳಸಿ; ಕೃಷಿ ಇಲಾಖೆ ಜೆಡಿ ಮಂಜುನಾಥ ಸಲಹೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಪ್ರಸಕ್ತ 2024ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಉತ್ತಮವಾದ ಮಳೆಯಾಗಿ ನಾಟಿ ಭತ್ತವನ್ನು ಹೊರತುಪಡಿಸಿ ಉಳಿದ ಬೆಳೆಗಳ ಬಿತ್ತನೆ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದೆ. ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಸಲಾಗುತ್ತಿದೆ. ರೈತರು ಕೇವಲ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರಗಳನ್ನು ಬಳಸದೆ ಪರ್ಯಾಯವಾಗಿ ಮಾರುಕಟ್ಟೆಯಲ್ಲಿ ದೊರೆಯುವ ನ್ಯಾನೊ ಡಿ.ಎ.ಪಿ ಮತ್ತು ನ್ಯಾನೊ ಯೂರಿಯಾಗಳನ್ನು ಬಳಸಬಹು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.
ಸಾಮಾನ್ಯ ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ನ್ಯಾನೊ ಯೂರಿಯಾವನ್ನು ಬಳಕೆ ಮಾಡಬಹುದು. ಪ್ರತಿ ಎಕರೆಗೆ 500 ಎಂ.ಎಲ್ ನ್ಯಾನೊ ಯೂರಿಯಾವನ್ನು ಬಳಸುವುದರಿಂದ ಬೆಳೆಗಳಿಗೆ ನೇರವಾಗಿ ಸಾರಜನಕವನ್ನು ಒದಗಿಸಿದಂತಾಗುತ್ತದೆ. ಜತೆಗೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವಲ್ಲಿ ನೆರವಾಗಲಿದೆ. ಇದರಿಂದ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸಿದಂತಾಗುತ್ತದೆ. ನಿರಂತರವಾಗಿ 2ರಿಂದ 3 ದಿನ ಮಳೆಯಾದಲ್ಲಿ ಬೆಳೆಗಳು ಹಳದಿ-ಕೆಂಪು ಆಗುವುದನ್ನು ತಪ್ಪಿಸಲು ನ್ಯಾನೊ ಡಿಎಪಿ ಮತ್ತು ಯೂರಿಯಾದ ಬಳಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ರೈತರು ನ್ಯಾನೊ ಡಿಎಪಿ ಮತ್ತು ನ್ಯಾನೊ ಯೂರಿಯಾ ಸಿಂಪಡಿಸಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.