ಹಾವೇರಿ: ಪ್ರಸಕ್ತ ಮುಂಗಾರಿನಲ್ಲಿ ತಾಲೂಕಿನಲ್ಲಿ ಈವರೆಗೆ 103 ಮಿ.ಮಿ ಮಳೆಯಾಗಿದ್ದು, ರೈತರು ಭೂಮಿ ಸಿದ್ಧತೆ ಕಾರ್ಯ ನಡೆಸಿದ್ದಾರೆ. ತಾಲೂಕಿನ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರು ಗುಣಮಟ್ಟದ ಕೃಷಿ ಪರಿಕರಗಳ ಮಾರಾಟ ಮಾಡಬೇಕು ಎಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಸೂಚನೆ ನೀಡಿದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ರೈತರು ವಿವಿಧ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳ ಖರೀದಿಯಲ್ಲಿ ತೊಡಗಿದ್ದಾರೆ. ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಕೊರತೆಯಾಗದಂತೆ ನಿರ್ವಹಿಸಬೇಕು ಎಂದರು.
ಜಿಲ್ಲೆಯ ವಿಚಕ್ಷಣಾ ದಳದ ಸಹಾಯಕ ಕೃಷಿ ನಿರ್ದೇಶಕ ಶಿವಲಿಂಗಪ್ಪ ವಿ.ಕೆ, ರಸಗೊಬ್ಬರ ನಿಯಂತ್ರಣ ಕಾಯ್ದೆ ಹಾಗೂ ಬೀಜ ಮತ್ತು ಕೀಟನಾಶಕಗಳ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.
ಬಿತ್ತನೆ ಬೀಜಗಳ ಪ್ಯಾಕೆಟ್‌ಗಳಿಗೆ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಅವುಗಳನ್ನು ಕೆ-ಕಿಸಾನ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಈವರೆಗೆ ಒಟ್ಟು 1552 ಕ್ವಿಂಟಾಲ್ ಗಳಷ್ಟು ವಿವಿಧ ಬಿತ್ತನೆ ಬೀಜಗಳನ್ನು ಒಟ್ಟು 8,329 ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಬಿತ್ತನೆ ಬೀಜಗಳನ್ನು ಸಾಕಷ್ಟು ದಾಸ್ತಾನು ಮಾಡಲಾಗಿದೆ ಎಂದರು.
ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಉಸ್ತುವಾರಿ ತಾಲೂಕು ನೋಡಲ್ ಅಧಿಕಾರಿ ಮಹಮ್ಮದ್ ರಫಿ, ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಎಸ್.ಕಾಮಣ್ಣವರ, ತಾಲೂಕಾ ತಾಂತ್ರಿಕ ಅಧಿಕಾರಿ ಧನಂಜಯ ನಾಗಣ್ಣನವರ, ತಾಲೂಕಿನ ಲೈಸನ್ಸ್ ಹೊಂದಿದ ವಿವಿಧ ಕೃಷಿ ಪರಿಕರ ಮಾರಾಟಗಾರರು ಮತ್ತು ಕೃಷಿ ಇಲಾಖೆಯ ಇತರರು ಸಭೆಯಲ್ಲಿ ಹಾಜರಿದ್ದರು.
ರಸಗೊಬ್ಬರ ಪೂರೈಕೆ:
ತಾಲೂಕಿನಲ್ಲಿ ಲೈಸನ್ಸ್ ಹೊಂದಿರುವ ರಸಗೊಬ್ಬರ ಮಾರಾಟ ಡೀಲರ್‌ಗಳಿಗೆ ವಿವಿಧ ರಸಗೊಬ್ಬರಗಳನ್ನು ದಾಸ್ತಾನು ಮಾಡಲು ಸೂಚನೆ ನೀಡಿದ್ದು, ರೈತರು ಅಧಿಕೃತ ಲೈಸನ್ಸ್ ಹೊಂದಿದ ರಸಗೊಬ್ಬರ ಮಾರಾಟಗಾರರಿಂದ ಖರೀದಿಸಬಹುದು. ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ರಸಗೊಬ್ಬರಗಳನ್ನು ಖರೀದಿಸಬಹುದು. ರೈತರು ಕೇವಲ ಒಂದೇ ಬಗೆಯ ರಸಗೊಬ್ಬರಕ್ಕೆ ಅವಲಂಭಿತರಾಗದೇ ಗಂಧಕ ಹಾಗೂ ಪೊಟ್ಯಾಷ್ ಅಂಶಗಳಿರುವ 20:20:0:13, 10:26:26 ಹಾಗೂ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸುವುದರಿಂದ ಪೋಷಕಾಂಶಗಳ ಸಮಗ್ರ ನಿರ್ವಹಣೆ ಸಾಧ್ಯ.
ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆ:
ತಾಲೂಕಿನ ಹಾವೇರಿ, ಕರ್ಜಗಿ ಹಾಗೂ ಗುತ್ತಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಬಿತ್ತನೆ ಬೀಜಗಳಾದ ಶೇಂಗಾ, ಸೋಯಾಅವರೆ, ತೊಗರಿ, ಹೆಸರು, ಗೋವಿನಜೋಳ, ಭತ್ತ ಹಾಗೂ ಇನ್ನಿತರ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರು ತಮ್ಮ ರೈತ ನೊಂದಣಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯೊಂದಿಗೆ ತಮ್ಮ ಜಮೀನಿನ ಉತಾರ ಹಾಜರುಪಡಿಸಿ ತಮ್ಮ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಗರಿಷ್ಠ 5 ಎಕರೆವರೆಗೆ ಬಿತ್ತನೆ ಬೀಜಗಳನ್ನು ಖರೀದಿಸಬಹುದು ಎಂದು ಎಡಿ ಹೇಳಿದರು.