ಜಿಲ್ಲೆ

ಬೆಳೆವಿಮೆ ದಾಖಲೆ ಸಲ್ಲಿಸಲು ಸೂಚನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಕಳೆದ 2023-24ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ವಿಮೆ ಪ್ರಸ್ತಾವನೆಗಳು ಬೆಳೆ ವಿಮೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೇ ವಿಮಾ ಸಂಸ್ಥೆಯವರಿಂದ ತಿರಸ್ಕೃತಗೊಂಡಿದ್ದ ಪ್ರಸ್ತಾವನೆಗಳನ್ನು ಮರು ಪರಿಶೀಲನೆಗಾಗಿ ತಾಲೂಕು ಮಟ್ಟದ ಸಮಿತಿಯ ಸಭೆಯಲ್ಲಿ ಸಿಂಧು ಎಂದು ಪರಿಗಣಿಸಲು ಅಗತ್ಯ ದಾಖಲೆಗಳನ್ನು ರೈತರು ಸಲ್ಲಿಸಬೇಕು ಎಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ತಿಳಿಸಿದ್ದಾರೆ.

ವಿಮಾ ಸಂಸ್ಥೆಯಿಂದ ತಿರಸ್ಕೃತ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ತಿರಸ್ಕೃತ ರೈತರು 2023-24ರ ತಮ್ಮ ಪಹಣಿಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ದಾಖಲಾಗಿದ್ದರೆ, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಶೀದಿ ಅಥವಾ ವಿಮೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಕೃಷಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ಅಂತಹ ದಾಖಲೆ ಹಾಗೂ ಬೆಳೆವಿಮೆಗೆ ನೋಂದಾಯಿಸಿದ ಬೆಳೆಗೆ ಸಂಬಂಧಿಸಿದಂತೆ ಇನ್ನಿತರ ದಾಖಲೆಗಳನ್ನು 15 ದಿನಗಳೊಳಗಾಗಿ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳ ಮುಖಾಂತರ ಸಮಿತಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.