ಜಿಲ್ಲೆ

ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಅದ್ವಾನ; ಹಾವೇರಿಯ ಚೆನ್ನಾಗಿರುವ ರಸ್ತೆಗಳು ಹಾಳು; ವಾಹನ ಸವಾರರಿಗೆ ನಿತ್ಯವೂ ತಪ್ಪದ ಗೋಳು

ಕೇಶವಮೂರ್ತಿ ಬೇಲೂರಪ್ಪನವರ

ಕೇಶವಮೂರ್ತಿ ವಿ.ಬಿ. ಹಾವೇರಿ

ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯಿಂದ ಹತ್ತು ಹಲವು ಅದ್ವಾನಗಳು ಸೃಷ್ಟಿಯಾಗುತ್ತಿದೆ. ಇದರಿಂದ ನಗರದ ಚೆನ್ನಾಗಿರುವ ರಸ್ತೆಗಳು ಹಾಳಾಗುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ನಗರಸಭೆ ವ್ಯಾಪ್ತಿಯ 15,000 ಮನೆಗಳಿಗೆ ಗ್ಯಾಸ್ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಒದಗಿಸುವ ಯೋಜನೆಯನ್ನು ಚನ್ನೈ ಮೂಲದ ಎಜಿಪಿ ಸಿಟಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕೈಗೆತ್ತಿಕೊಂಡಿದೆ. ನಗರದ ಪಿಬಿ ರಸ್ತೆ, ಹಾವೇರಿ ಮುನ್ಸಿಪಲ್ ಹೈಸ್ಕೂಲ್ ರಸ್ತೆ, ದೇವಗಿರಿ ರಸ್ತೆ, ವಿದ್ಯಾನಗರ, ಸೇರಿದಂತೆ ವಿವಿಧೆಡೆಗಳಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಲಿದೆ.
ಪೈಪ್‌ಲೈನ್ ಅಳವಡಿಸುವ ಸಿಬ್ಬಂದಿ ಮಳೆ ಬಂದಾಗಲೇ ಅವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿರುವ ಕಾರಣ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೈಪ್ ಹಾಕಿದ ಸ್ಥಳದಲ್ಲಿ ಮಣ್ಣು, ಜಲ್ಲಿ ಕಲ್ಲು ಹಾಕಿ ಅರೆಬರೆ ಕಾಮಗಾರಿ ಮಾಡಿ ಹೋಗುತ್ತಿದ್ದಾರೆ. ಸರಿಯಾದ ಎಚ್ಚರಿಕೆ ಫಲಕಗಳನ್ನೂ ಹಾಕುತ್ತಿಲ್ಲ. ತಿಂಗಳು, ಎರಡು ತಿಂಗಳಾದರೂ ಹಾಗೆಯೇ ಬಿಡುತ್ತಿದ್ದಾರೆ.
ಇದರಿಂದ ಬಿಸಿಲು ಬಂದರೆ ಧೂಳು, ಮಳೆ ಬಂದರೆ ಕೆಸರು ಸೃಷ್ಟಿಯಾಗುತ್ತಿದೆ. ಸಣ್ಣ ಮಳೆ ಬಂದರೂ ಕೆಸರು ರಾಡಿ ಪಿಬಿ ರಸ್ತೆ ಮೇಲೆ ಕಾಣಿಸುತ್ತಿದೆ. ಈ ಕಾಮಗಾರಿಯಿಂದಾಗಿ ಹಲವು ಅಪಘಾತಗಳು ಸಂಭವಿಸಿವೆ. ಅನೇಕ ಬೈಕ್ ಸವಾರರು ಕೆಸರಿನಿಂದ ಜಾರಿ ಬಿದ್ದು ಮೈಕೈ ಗಾಯ ಮಾಡಿಕೊಂಡಿದ್ದಾರೆ.
ಇನ್ನಾದರೂ ಕಂಪನಿಯವರು ಎಚ್ಚೆತ್ತುಕೊಂಡು ವೈಜ್ಞಾನಿಕ ರೀತಿಯಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾರ್ಯ ಮಾಡಬೇಕು. ಗುಂಡಿ ಅಗೆದ ಬಳಿಕ ಅದು ಹೇಗಿತ್ತೋ ಹಾಗೆ ಗುಣಮಟ್ಟದ ರಸ್ತೆ ಮಾಡಿಕೊಡಬೇಕು. ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಡಳಿತವೂ ಗಮನ ಹರಿಸಬೇಕಿದೆ.

ಕಚೇರಿಗೆ ನಾಮಫಲಕವಿಲ್ಲ
ಎಜಿಪಿ ಗ್ಯಾಸ್ ಪೈಪ್‌ಲೈನ್ ಕಂಪನಿಯ ಹಾವೇರಿ ನಗರದ ಶಾಖಾ ಕಚೇರಿ ಎಲ್ಲಿದೆ ಎಂಬುದು ಬಹುಶಃ ಬಹುತೇಕ ಜನರಿಗೆ ಗೊತ್ತಿಲ್ಲ. ಯಾಕೆಂದರೆ ಕಟ್ಟಡದ ಎದುರು ಅವರು ನಾಮಫಲಕವನ್ನೇ ಹಾಕಿಲ್ಲ. ಇದರಿಂದಾಗಿ ಜನಸಂಪರ್ಕವೇ ಇಲ್ಲದಾಗಿದೆ. ಎಲ್‌ಐಸಿ ಎದುರಿನ ನೀಲನಗೌಡ್ರ ಕಾಂಪ್ಲೆಕ್ಸ್ 1ನೇ ಮಹಡಿಯಲ್ಲಿರುವ ಈ ಕಚೇರಿ ಇರುವ ಕಟ್ಟಡದ ಹೊರಗೆ ಇನ್ನಾದರೂ ಜನರಿಗೆ ಕಾಣುವಂತೆ ದೊಡ್ಡ ಬೋರ್ಡ್ ಅಳವಡಿಸಬೇಕಿದೆ. ಕಾಮಗಾರಿ ಸ್ಥಳದಲ್ಲಿ ಕಂಪನಿ ಅಥವಾ ಗುತ್ತಿಗೆದಾರರ ಮೊಬೈಲ್ ಸಂಖ್ಯೆ ಪ್ರದರ್ಶಿಸಬೇಕಿದೆ.

5 ಅಡಿ ಕುಸಿದ ಲಾರಿ
ಹಾವೇರಿ ನಗರದ ಪ್ರವಾಸಿ ಮಂದಿರ(ಐಬಿ)ದ ಎದುರು ಸಿಮೆಂಟ್ ತುಂಬಿಕೊಂಡು ಬಂದಿದ್ದ ಲಾರಿಯೊಂದು ಗ್ಯಾಸ್ ಪೈಪ್‌ಲೈನ್ ಅಳವಡಿಸಿದ್ದ ಜಾಗದಲ್ಲಿ ನಿಲ್ಲಿಸಿದ ಐದೇ ನಿಮಿಷದಲ್ಲಿ ಐದು ಅಡಿ ಕುಸಿದಿತ್ತು. ಬಳಿಕ ಚಾಲಕ ಎಷ್ಟೇ ಪ್ರಯತ್ನಿಸಿದರೂ ಲಾರಿ ಮೇಲೇಳಲೇ ಇಲ್ಲ. ಬಹುತೇಕ ವಾಲಿಕೊಂಡ ಪರಿಣಾಮ ಆತಂಕಗೊಂಡಿದ್ದ. ಕೊನೆಗೆ ಎಜಿಪಿ ಕಂಪನಿಯವರು ಕ್ರೇನ್ ಕಳುಹಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆ ಎತ್ತಿದ ಪ್ರಸಂಗ ನಡೆಯಿತು.

ಕೋಟ್:
ಎಜಿಪಿ ಗ್ಯಾಸ್‌ಪೈಪ್‌ಲೈನ್ ಅಳವಡಿಕೆ ಕಾರ್ಯ ಮಾರ್ಚ್ 2022ರಂದು ಆರಂಭಗೊಂಡಿದೆ. ಮಾರ್ಚ್ 2024ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಮಳೆಗಾಲ ಮತ್ತಿತರ ಕಾರಣ ಹೇಳಿ ಕಂಪನಿಯವರು ಸೆಪ್ಟೆಂಬರ್ 2024ರವರೆಗೆ ಹೆಚ್ಚುವರಿ ಕಾಲಾವಕಾಶ ಪಡೆದಿದ್ದಾರೆ. ಡಿಸೆಂಬರ್ 2025ರ ವೇಳೆಗೆ ಮನೆ ಮನೆಗೆ ಗ್ಯಾಸ್ ಸೇವೆ ನೀಡಲಾಗುವುದು.
- ಗೋಸ್ವಾಮಿ ಜಿತೇಂದ್ರಗಿರಿ, ಪ್ರಾದೇಶಿಕ ಮುಖ್ಯಸ್ಥ, ಎಜಿಪಿ ಕಂಪನಿ

ಕೋಟ್:
ಪ್ರವಾಸಿ ಮಂದಿರದ ನೂತನ ಕಟ್ಟಡ ಕಾಮಗಾರಿಗೆಂದು ಬಾಗಲಕೋಟೆಯಿಂದ ಸಿಮೆಂಟ್ ತುಂಬಿಕೊಂಡು ಬಂದಿದ್ದೆ. ಮೇಲ್ವಿಚಾರಕರೊಂದಿಗೆ ಮಾತನಾಡಿ ಬರುವಷ್ಟರಲ್ಲಿ ಟ್ರಕ್ 5 ಅಡಿ ಕುಸಿದಿತ್ತು. ಬಳಿಕ ಅಲ್ಲಿ ಗ್ಯಾಸ್ ಪೈಪ್ ಅಳವಿಡಿಸಿದ ವಿಷಯ ಗೊತ್ತಾಯಿತು.
- ರಿಷಿಕುಮಾರ್, ಲಾರಿ ಚಾಲಕ

ಕೋಟ್:
ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾರ್ಯದಿಂದಾಗಿ ಬಸವೇಶ್ವರ ನಗರದ ಹಲವು ಮನೆಗಳ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣಗೊಂಡಿತ್ತು. ‘ವಿಜಯವಾಣಿ’ ಪತ್ರಿಕೆಯ ವರದಿ ಬಳಿಕ ಎಚ್ಚೆತ್ತು ಸರಿಪಡಿಸಿದ್ದರು. ಇದೀಗ ನಗರದ ಅಲ್ಲಲ್ಲಿ ರಸ್ತೆ ಅಗೆದು, ಖಡಿ ಹಾಕಿ ಹಾಗೆಯೇ ಬಿಟ್ಟಿದ್ದಾರೆ. ಮೊದಲಿದ್ದ ಹಾಗೆ ರಸ್ತೆ ಸರಿಪಡಿಸಬೇಕು.
- ಮಂಜುನಾಥ ಮತ್ತಿಹಳ್ಳಿ, ಸ್ಥಳೀಯ ನಿವಾಸಿ