ಜಿಲ್ಲೆ

ನಾಡಿಗೆ ಮಳೆ-ಬೆಳೆ ಸಮೃದ್ಧಿಯಾಗಲಿ; ಅಗಡಿ ಜೀವನ ದರ್ಶನ ಪ್ರವಚನ ಸಮಾರಂಭದಲ್ಲಿ ಶ್ರೀ ಫಕೀರ ಸಿದ್ದರಾಮ ಸ್ವಾಮೀಜಿ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ದಕ್ಷಿಣ ಸಂಹಾರಕ್ಕಾಗಿ ಅವತಾರವೆತ್ತಿದ ವೀರಭದ್ರ ದೇವರ ಜಾತ್ರೆಯಲ್ಲಿ ನಡೆಯುತ್ತಿರುವ ಜೀವನ ದರ್ಶನ ಪ್ರವಚನದ ಕಾರಣ ನಾಡಿನಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ ನಾಡಿನ ಜನರು ಸುಭಿಕ್ಷೆಯಿಂದ ಇರಲಿ ಎಂದು ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ ಹಾರೈಸಿದರು.
ತಾಲೂಕಿನ ಅಗಡಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನದ ಶತಮಾನೋತ್ಸವದ ಅಂಗವಾಗಿ ದೇವಸ್ಥಾನ ಆವರಣದ ಶರಣರ ಸಂಗಮ ವೇದಿಕೆಯಲ್ಲಿ ಆಯೋಜಿಸಿರುವ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಜನರು ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿದರು. ಇನ್ನೊಬ್ಬ ಅತಿಥಿ ಮಂಜುನಾಥ ಕುಮ್ಮರಿ ಮಾತನಾಡಿ, ಮನುಷ್ಯನ ಜೀವನಕ್ಕೆ ಶಿಕ್ಷಣ- ಸಂಸ್ಕಾರದ ಜತೆಗೆ ಅಧ್ಯಾತ್ಮದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಮಖಂಡಿಯ ಓಂಕಾರ ಆಶ್ರಮದ ಶರಣೆ ಜಯಶ್ರೀದೇವಿ ‘ಜೀವನ ದರ್ಶನ’ ಪ್ರವಚನ ನೀಡಿದರು.
ಪ್ರಭುಸ್ವಾಮಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಅಗಡಿ ಅಕ್ಕಿ ಮಠದ ಶ್ರೀ ಗುರುಲಿಂಗ ಸ್ವಾಮೀಜಿ ಮಾತನಾಡಿದರು. ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಬಲಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮತ್ತಿತರರು ಭಾಗವಹಿಸಿದ್ದರು.
ಮಂಜಯ್ಯ ಹಿರೇಮಠ ಸ್ವಾಗತಿಸಿದರು. ಮಹಾಂತೇಶ ಮೂಲಿಮನಿ ನಿರೂಪಿಸಿದರು. ಈರಯ್ಯ ಬನ್ನಿಕೊಪ್ಪ ವಂದಿಸಿದರು.