ಹಾವೇರಿ: ಕ್ರಿಯಾ ಯೋಜನೆ ರೂಪಿಸುವ ಅಧಿಕಾರಿಗಳ ದೃಷ್ಟಿಕೋನ ಬದಲಾಗಬೇಕು. ಸಮಗ್ರ ದೃಷ್ಟಿಕೋನ ಇಟ್ಟುಕೊಂಡು ಕಾರ್ಯಯೋಜನೆ ರೂಪಿಸಬೇಕು. ಕಡಿಮೆ ಅನುದಾನ ಹೆಚ್ಚು ಫಲಿತಾಂಶದ ದೃಷ್ಟಿಕೋನ ಇಟ್ಟುಕೊಂಡು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಡಾ.ವಿಶಾಲ ಆರ್. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಪಾಲ್ಗೊಂಡು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯ ಅನುಮೋದನಾ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವುದೋ ಒಂದು ಯೋಜನೆಯ ಬೆಲೆಗಿಂತ ಮೌಲ್ಯ ಮುಖ್ಯವಾದದ್ದು. ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.
ಕೈಗಾರಿಕಾ ಇಲಾಖೆಯಿಂದ ನವ ಉದ್ಯಮದಾರರ ಪ್ರವಾಸವನ್ನು ಹೊರ ರಾಜ್ಯಗಳ ಕೈಗಾರಿಕಾ ವೀಕ್ಷಣಾ ಪ್ರದೇಶಕ್ಕೆ ಕರೆದೊಯ್ಯುವ ಬದಲು ರಾಜ್ಯದ ಪಿಣ್ಯ ಸೇರಿದಂತೆ ಇತರ ಕೈಗಾರಿಕಾ ಪ್ರದೇಶಗಳಿಗೆ ಪ್ರವಾಸ ಕೈಗೊಂಡರೆ ಅನುದಾನ ಉಳಿತಾಯದ ಜತೆಗ ಹೆಚ್ಚು ಫಲಾನುಭವಿಗಳಿಗೆ ಈ ಸೌಲಭ್ಯ ದೊರಕಿಸಿಕೊಡಬಹುದು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಅಕ್ಷಯ ಶ್ರೀಧರ, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
ಡಿಡಿಪಿಐಗೆ ತರಾಟೆ
ಶಾಲಾ ಶಿಕ್ಷಣ ಇಲಾಖೆಗೆ 21 ಲಕ್ಷ ರೂ. ನಿಗದಿ ಮಾಡಿದ ಅನುದಾನದಲ್ಲಿ ಯಾವ ಕಾರ್ಯಕ್ರಮಕ್ಕೆ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ನೀಡುವಾಗ ‘ಸ್ಮಾರ್ಟ್ ಕ್ಲಾಸ್’ಗೆ ಬಳಸಲಾಗಿದೆ ಎಂದು ಡಿಡಿಪಿಐ ಜಗದೀಶ್ವರ ಮೊದಲು ಉತ್ತರಿಸಿದರು. ಕೊನೆಯಲ್ಲಿ ‘ಕಂಪ್ಯೂಟರ್ ಖರೀದಿ’ಗೆ ಬಳಸಲಾಗಿದೆ ಎಂದು ಅಸ್ಪಷ್ಟ ಮಾಹಿತಿ ನೀಡಿದರು. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಾ.ವಿಶಾಲ ಅವರು, ‘ನಿಮ್ಮನ್ನು ಏಕೆ ಅಮಾನತುಗೊಳಿಸಬಾರದು,’ ಎಂದು ಸೂಕ್ತವಾದ ಮಾಹಿತಿಯೊಂದಿಗೆ ಸಭೆಗೆ ಆಗಮಿಸಿ ಎಂದು ತರಾಟೆಗೆ ತೆಗೆದುಕೊಂಡರು.