ಹಾವೇರಿ: ಗಾಂಜಾ, ಡ್ರಗ್ಸ್ ವ್ಯಸನದಿಂದ ಯುವಕರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಅ.20ರಿಂದ 27ರವರೆಗೆ ರಾಜ್ಯಾದ್ಯಂತ ಕಾಲೇಜ್ ಕ್ಯಾಂಪಸ್‌ಗಳಲ್ಲಿ 'ನಶೆಮುಕ್ತ ಕ್ಯಾಂಪಸ್' ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿ ಉತ್ತರ ಪ್ರಾಂತ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಕೈಗೆ ಸಲೀಸಾಗಿ ಸಿಗುತ್ತಿರುವ ಮಾದಕ ವ್ಯಸನದ ವಿರುದ್ಧ ಹೋರಾಟ ಆರಂಭವಾಗಲಿದೆ. ನಶೆಮುಕ್ತ ಕ್ಯಾಂಪಸ್‌ಗಳ ನಿರ್ಮಾಣ ನಮ್ಮ ಗುರಿಯಾಗಿದೆ. ಕಾಲೇಜ್‌ಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ಹಾವೇರಿಯ ಶ್ರೀ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಸೆ.28, 29ರಂದು ನಡೆದ ಉತ್ತರ ಪ್ರಾಂತ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಉತ್ತರ ಪ್ರಾಂತದ 16 ಜಿಲ್ಲೆಗಳಿಂದ 112 ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಹಾಗೂ ರಾಜ್ಯದ ವರ್ತಮಾನ ಪರಿಸ್ಥಿತಿಗೆ ಸಂಬಂಧಿಸಿದಂತೆ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಶಾಲಾ-ಕಾಲೇಜುಗಳಲ್ಲಿ 2023ರ ಸರ್ಕಾರದ ವರದಿಯ ಪ್ರಕಾರ 1.41 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಅವುಗಳ ನೇಮಕಾತಿಗೆ ಒತ್ತಾಯಿಸುವುದು, ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಿಸುವುದು, ಸೇರಿದಂತೆ ವಿವಿಧ ವಿಷಯಗಳ ಕುರಿತು ಬೇಡಿಕೆ ಹಾಗೂ ನಿರ್ಣಯಗಳನ್ನು ಕೈಗೊಂಡಿದ್ದು, ಇವುಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಹಾಗೂ ಕಲಬುರಗಿಯಲ್ಲಿ ರಾಜ್ಯ ಸಮ್ಮೇಳನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಸ್ ಸಂಚಾರ ದುಸ್ತರವಾಗಿದ್ದು, ಹೆಚ್ಚುವರಿ ಬಸ್ ಬಿಡಬೇಕು. ವಿಶ್ವವಿದ್ಯಾಲಯಗಳ ಅನುದಾನ, ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು. ವಸತಿ ನಿಲಯಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟಬೇಕು ಎಂದು ಸಭೆ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ ದೊಡಮನಿ, ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ, ನಗರ ವಿದ್ಯಾರ್ಥಿನಿ ಪ್ರಮುಖ ಕಾವ್ಯಾ ದೊಡಮನಿ, ಮಾಧ್ಯಮ ಮತ್ತು ಜಾಲತಾಣ ಪ್ರಮುಖ ಕಿರಣ ಶೀಗಿಹಳ್ಳಿ, ಇತರರಿದ್ದರು.
ವಿವಿಗಳಿಗೆ ಏಕರೂಪ ವೇಳಾಪಟ್ಟಿ
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಏಕರೂಪ ವೇಳಾಪಟ್ಟಿಯನ್ನು ಜಾರಿಗೆ ತರುವಂತೆ ಎಬಿವಿಪಿ ರಾಜ್ಯ ಉನ್ನತ ಶಿಕ್ಷಣ ಸಚಿವರಿಗೆ ಒತ್ತಾಯಿಸಿತ್ತು. ಆ ಪ್ರಕಾರ ಸರ್ಕಾರ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಜಾರಿಗೊಳಿಸಿತ್ತು. ಆದರೆ, ವಿಶ್ವವಿದ್ಯಾಲಯಗಳು ಅದನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು ಸಚಿನ ಕುಳಗೇರಿ.