ಜಿಲ್ಲೆ

ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಿ; ರಾಜ್ಯ ಸರ್ಕಾರಕ್ಕೆ ಆಮ್ ಆದ್ಮಿ ಕಾರ್ಯಕರ್ತರ ಆಗ್ರಹ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನವೆಂಬರ್ ಕಳೆದರೂ ಮಳೆ ಬಾರದ ಹಿನ್ನೆಲೆಯಲ್ಲಿ ಮತ್ತಷ್ಟು ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹಿಂದೆ ಮುಂದೆ ನೋಡದೇ ಅನ್ನದಾತನ ನೆರವಿಗೆ ಧಾವಿಸಬೇಕು. ಎಕರೆಗೆ ತಲಾ 25 ಸಾವಿರ ರೂ. ಪರಿಹಾರವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಕಾರ್ಯಕರ್ತರು, ಬರ ಪೀಡಿತ ಪ್ರದೇಶಗಳ ಸರಿಯಾದ ವೈಜ್ಞಾನಿಕ ಸಮೀಕ್ಷೆ ಮಾಡಬೇಕು. ಸರ್ವ ಪಕ್ಷಗಳ ನಿಯೋಗ ದೆಹಲಿಗೆ ತೆರಳಿ , ತುರ್ತು ಪರಿಸ್ಥಿತಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಬೆಳೆ ಹಾನಿಯಾದ ರೈತರಿಗೆ ತುರ್ತಾಗಿ ಬೆಳೆವಿಮೆ ಒದಗಿಸಬೇಕು. ಪ್ರತಿ ಜಾನುವಾರಿಗೆ 5,000 ರೂ. ಪರಿಹಾರ ಒದಗಿಸಬೇಕು. ಅಗತ್ಯ ಇರುವವರಿಗೆ ಮನರೇಗಾ ಕಾಮಗಾರಿ ಸೌಲಭ್ಯ ಸಿಗುವಂತೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಪರೀದ್ ನದಾಫ್, ಎಂ.ಡಿ.ಕಾಲೇಭಾಗ, ರಾಜಶೇಖರ ದೂದಿಹಳ್ಳಿ, ಶಿವನಗೌಡ ಪಾಟೀಲ, ಇತರರಿದ್ದರು.