ಜಿಲ್ಲೆ

ಜಿಪಂ, ತಾಪಂ ಚುನಾವಣೆಗೆ ಆಮ್ ಆದ್ಮಿ ಸ್ಪರ್ಧೆ; ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಮಾಹಿತಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಸದ್ಯದಲ್ಲೇ ಘೋಷಣೆಯಾಗಲಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಮ್ ಆದ್ಮಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ ಕೇಜ್ರಿವಾಲ ಅವರು ಆಪ್ ಪಕ್ಷವನ್ನು ಕಟ್ಟಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಹೋರಾಟ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಸುಮಾರು 18 ಲಕ್ಷ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗೆ ಸೇರ್ಪಡೆ ಮಾಡಿ ಗುಣಮಟ್ಟದ ಶಿಕ್ಷಣ ಕೊಡಿಸಿದೆ. ಸಣ್ಣ ಸಣ್ಣ ಕ್ಲಿನಿಕ್ ಸ್ಥಾಪಿಸಿ ಉಚಿತ ಆರೋಗ್ಯ ಸೇವೆ ಒದಗಿಸಲಾಗಿದೆ. ಪಂಜಾಬ್‌ನಲ್ಲಿ ಇದೇ ಮಾದರಿ ಸರ್ಕಾರ ನಡೆಸಲಾಗುತ್ತಿದೆ. ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಿದ್ದರಿರುವ ಕಾರ್ಯಕರ್ತರನ್ನು ಜಿಪಂ, ತಾಪಂಗಳಲ್ಲಿ ಆಕಾಂಕ್ಷಿಗಳನ್ನಾಗಿ ನೇಮಕ ಮಾಡುತ್ತೇವೆ ಎಂದರು.

ಆಪ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಆಗದಂತೆ ಕಾಲಕಾಲಕ್ಕೆ ಪೂರೈಸಬೇಕು. ಸರ್ಕಾರಿ ಶಾಲೆಗಳ ಕಳಪೆ ಕಟ್ಟಡಗಳ ದುರಸ್ಥಿ ಮಾಡಿಸಬೇಕು. ಡೋನೇಷನ್ ಹಾವಳಿ ತಪ್ಪಿಸಬೇಕು. ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ನಿಷ್ಕ್ರಿಯರಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಗಮನ ಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಜಗದೀಶ ಕದಂ, ಸಂಘಟನಾ ಕಾರ್ಯದರ್ಶಿ ಅರ್ಜುನ್ ಹಲಗಿಗೌಡ್ರ, ಫರೀದ್ ನದಾಫ, ಎಂ.ಎನ್ ನಾಯಕ, ರವಿ, ಕುಮಾರಸ್ವಾಮಿ ಯೋಗಿಮಠ, ಭುವನೇಶ್ವರಿ ಬಡಮ್ಮನವರ, ರಾಜು ಅಂಗಡಿ, ಮಂಜಪ್ಪ ಸಂಭೋಜಿ ಇದ್ದರು.