ಹಾವೇರಿ: ಷೇರು ಮಾರುಕಟ್ಟೆಯಲ್ಲಿ 75 ಲಕ್ಷ ರೂ. ಹೂಡಿಕೆ ಮಾಡಿದರೆ ಅಧಿಕ ಲಾಭ ಕೊಡುವುದಾಗಿ ನಂಬಿಸಿ ನಗರದ ವೈದ್ಯರೊಬ್ಬರಿಂದ 71,50,000 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಹಾವೇರಿ ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಅಶ್ವಿನಿನಗರ 1ನೇ ಕ್ರಾಸ್ ನಿವಾಸಿ ಡಾ.ಗೌತಮ ಲೋಡಾಯಾ ವಂಚನೆಗೀಡಾದವರು.
ವಂಚಕರು ಸೆ.5ರಿಂದ 13ರ ನಡುವೆ ಮೊ.ಸಂ. 93668 44718 ಹಾಗೂ 70855 12684 ಯಿಂದ ಲೋಡಾಯಾ ಅವರ ನಂಬರ್‌ಗೆ ವಾಟ್ಸ್ ಆ್ಯಪ್ ಮೂಲಕ ಮೆಸೇಜ್ ಮಾಡಿದ್ದರು. ಫಸ್ಟ್ ಮಾರ್ಕ್ ಫ್ಲಾೃಟ್‌ಫಾರ್ಮ್ (ಊಜ್ಟಿಠಿ ಚ್ಟ ಕ್ಝೃಠ್ಛಿಟ್ಟಞ) ಮೂಲಕ 75 ಲಕ್ಷ ರೂ. ಇನ್ವೆಸ್ಟ್ ಮಾಡಿದರೆ, ಐಪಿಒ ಖರೀದಿಸಲು ಶೇ.100ರಷ್ಟು ಹಾಗೂ ಶೇರ್ ಟ್ರೇಡಿಂಗ್‌ಗೆ ಶೇ.20ರಷ್ಟು ಲಾಭ ಕೊಡುವುದಾಗಿ ನಂಬಿಸಿದ್ದರು.
ಬಳಿಕ ಹಣ ಹಾಕಬೇಕಾದ ಬ್ಯಾಂಕ್ ಖಾತೆಗಳ ವಿವರವನ್ನು ಕಳುಹಿಸಿದ್ದರು. ವರ್ಮಾ ಸ್ಪೇರ್ ಪಾರ್ಟ್ಸ್, ಭೇರುನಾಥ ಕನ್‌ಸ್ಟ್ರಕ್ಷನ್ ಹಾಗೂ ಶಿವಶಕ್ತಿ ಪ್ರಾಪರ್ಟಿಸ್ ಹೆಸರಿನ ಮೂರು ಖಾತೆಗಳಿಗೆ ಒಟ್ಟು 71,50,000 ರೂ. ವರ್ಗಾಯಿಸಿದ್ದಾರೆ. ನಂತರ ಹಣ ಕೊಡದೇ ವಂಚಿಸಿದ್ದಾರೆ ಎಂದು ಲೋಡಾಯಾ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.