ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
‘ಜೀವದ ಹಂಗು ತೊರೆದು ಬಸ್ ಹತ್ತಬೇಕ್ರಿ. ಫುಲ್ ರಶ್ ಆಗಿ ಬಸ್ ಬರ್ತಾವು.. ಅದ್ರಾಗ ಹತ್ತಾಕ ಜಾಗ ಇರಾಂಗಿಲ್ಲ. ಹಿಂಗಾದ್ರ ನಾವು ಹ್ಯಾಂಗ್ ಬಸ್ ಹತ್ತಬೇಕು? ಬಸ್ ಸಲುವಾಗಿ ಕಾಲೇಜೇ ಬೇಡ ಅನಸಾಕ ಹತೆôತ್ರಿ...’
ಇದು ತಾಲೂಕಿನ ಗ್ರಾಮೀಣ ಭಾಗದಿಂದ ಪ್ರತಿನಿತ್ಯ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಬೇಸರದ ನುಡಿಗಳು...
ಹೌದು! ರಾಜ್ಯ ಸರ್ಕಾರ ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಜಿಲ್ಲೆಯಾದ್ಯಂತ ಸರ್ಕಾರಿ ಬಸ್ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಇದರಿಂದ ನಿತ್ಯವೂ ಶಾಲಾ, ಕಾಲೇಜ್ಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್ ಹತ್ತಲು ಹರಸಾಹಸ ಪಡುವಂತಾಗಿದೆ.
ತಾಲೂಕಿನಲ್ಲಿ 108 ಗ್ರಾಮಗಳಿವೆ. ತಾಲೂಕು ಸಾರಿಗೆ ಘಟಕದಲ್ಲಿ 119 ಬಸ್ಗಳಿದ್ದು, ಅದರಲ್ಲಿ 114 ಬಸ್ಗಳನ್ನು ರಾಜ್ಯ, ಅಂತಾರಾಜ್ಯ ಹಾಗೂ ತಾಲೂಕಿನ ಗ್ರಾಮೀಣ ಭಾಗದ ರೂಟ್ಗಳಿಗೆ ಬಿಡಲಾಗಿದೆ.
ಬಹುತೇಕ ಗ್ರಾಮದ ವಿದ್ಯಾರ್ಥಿಗಳು ಹೈಸ್ಕೂಲ್ನಿಂದ ಹಿಡಿದು ಕಾಲೇಜ್ವರೆಗೂ ರಾಣೆಬೆನ್ನೂರ ನಗರದ ಶಿಕ್ಷಣ ಸಂಸ್ಥೆಗಳನ್ನೇ ಆಶ್ರಯಿಸಿದ್ದಾರೆ. ಆದ್ದರಿಂದ ಭಾನುವಾರ ಒಂದು ದಿನ ಹೊರತು ಪಡಿಸಿ ನಿತ್ಯವೂ ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ನಗರಕ್ಕೆ ಬಂದು ಹೋಗುತ್ತಾರೆ.
ರಾಜ್ಯ ಸರ್ಕಾರ ಶಕ್ತಿ ಯೋಜನೆ ಘೋಷಿಸಿದ ದಿನದಿಂದ ನಿತ್ಯವೂ ಗ್ರಾಮೀಣ ಭಾಗದಿಂದ ಬರುವ ಬಸ್ಗಳು ಮಹಿಳೆಯರಿಂದ ತುಂಬಿರುತ್ತವೆ. ಇದರಿಂದಾಗಿ ಶಾಲಾ ಕಾಲೇಜ್ಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಜಾಗ ಇಲ್ಲದಂಥ ಪರಿಸ್ಥಿತಿ ನಿರ್ವಣವಾಗಿದೆ.
ತಾಲೂಕಿನ ದೊಡ್ಡ ಗ್ರಾಮಗಳಾದ ಮೇಡ್ಲೇರಿ, ತುಮ್ಮಿನಕಟ್ಟಿ, ಹಲಗೇರಿ ಸೇರಿ ಇತರ ಊರುಗಳಿಂದ ಬರುವ ಬಸ್ಗಳಲ್ಲಿ ನಿತ್ಯವೂ ಜಾಗ ಇರುವುದಿಲ್ಲ. ಹೀಗಾಗಿ ಈ ಭಾಗದಿಂದ ಶಾಲೆ, ಕಾಲೇಜ್ಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲು ಆಗದೆ ಪರಿತಪಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಬಸ್ನಲ್ಲಿ ಜಾಗವಿಲ್ಲದ ಕಾರಣ ಖಾಸಗಿ ವಾಹನ ಹಿಡಿದು ನಗರಕ್ಕೆ ಹೋಗುವ ಸ್ಥಿತಿ ನಿರ್ವಣವಾಗಿದೆ. ಖಾಸಗಿಯವರು ಸಾಕಷ್ಟು ಸೀಟ್ ಆಗುತ್ತಿಲ್ಲ ಎಂದು ಅಲ್ಲಲ್ಲಿ ನಿಂತು ಜನರನ್ನು ಕೂಗಿ ಕರೆದು ವಾಹನ ಭರ್ತಿ ಮಾಡಿಕೊಳ್ಳುತ್ತ ಹೋಗುವುದಿದೆ. ಇದರಿಂದಾಗಿ ತಾಲೂಕು ಕೇಂದ್ರ ತಲುಪಲು ತಡವಾಗುತ್ತದೆ. ಆದ್ದರಿಂದ ಸಾರಿಗೆ ಸಂಸ್ಥೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಶಾಲಾ-ಕಾಲೇಜ್ ಸಮಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗ್ಗೆ ಹಾಗೂ ಸಂಜೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು, ಪಾಲಕರು ಒತ್ತಾಯಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲೇಬೇಕು ಎನ್ನುವ ವಿದ್ಯಾರ್ಥಿಗಳು ಬಸ್ನಲ್ಲಿ ಜಾಗವಿಲ್ಲದ ಕಾರಣ ಬಾಗಿಲಲ್ಲಿ ಹಾಗೂ ಫುಟ್ಬೋರ್ಡ್ ಮೇಲೆ ನಿಂತು ಹೋಗುತ್ತಿರುವ ದೃಶ್ಯಗಳು ನಿತ್ಯವೂ ಕಂಡು ಬರುತ್ತಿವೆ. ಬಾಲಕಿಯರು ಸಹ ಬಾಗಿಲಲ್ಲಿ ನಿಂತು ಸಾಹಸದ ಪ್ರಯಾಣ ಮಾಡುವುದು ಭಯ ಹುಟ್ಟಿಸುತ್ತವೆ. ಇತ್ತೀಚೆಗೆ ಹಾನಗಲ್ಲ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಬಸ್ ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸುವಾಗ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಆದ್ದರಿಂದ ಸಾರಿಗೆ ಅಧಿಕಾರಿಗಳು ಕೂಡಲೇ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.