ಜಿಲ್ಲೆ

ಮಹಿಳೆಯರ ಬಗೆಗಿರಲಿ ಅಪಾರ ಗೌರವ

ಬಸವರಾಜ ವೀರಪ್ಪ ಗರಗ

ಸವಣೂರ: ಮಹಿಳೆ ಸಾಧನೆ ಮೂಲಕ ತನ್ನ ಶಕ್ತಿ ತೋರಿಸುತ್ತಿದ್ದಾಳೆ. ಮಹಿಳೆಯರಿಗೆ ಮಾತೃತ್ವ ಅನ್ನುವುದು ದೇವರು ಕರುಣಿಸಿದ ಅದೃಷ್ಟದ ವರ. ಹೆಣ್ಣನ್ನು ಗೌರವಿಸಿ ಬೆಳೆಸಿ ಸಂಸ್ಕಾರದೊಂದಿಗೆ ಶಿಕ್ಷಣವಂತರಾಗಿ ಮಾಡಬೇಕು ಎಂದು ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜೆಸಿಐ ನಮ್ಮ ಸವಣೂರು ಘಟಕ ಸಹಯೋಗದಲ್ಲಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಗು ದಿನ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಿತ್ಯ ಒತ್ತಡದ ಜೀವನದಲ್ಲಿ ಸಮಾಜ, ಕುಟುಂಬದೊಂದಿಗೆ ಹೊಂದಾಣಿಕೆಯಿಂದ ವೈಯಕ್ತಿಕ ಆಸೆಗಳನ್ನು ಬದಗಿರಿಸಿ ಮಾತೃ ಹೃದಯವುಳ್ಳ ಹೆಣ್ಣು ಜೀವಕ್ಕೆ ಸರ್ವರ ಬೆಂಬಲ ಅವಶ್ಯವಾಗಿದೆ ಎಂದರು.

ಸಿಡಿಪಿಒ ಉಮಾ ಕೆ.ಎಸ್., ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಮಹಿಳೆ ಪುರುಷರ ಸಮನಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾಳೆ ಎಂದರು.

ಜೆಸಿಐ ನಮ್ಮ ಸವಣೂರು ಘಟಕದ ಪೂರ್ವಾಧ್ಯಕ್ಷ ಬಸವರಾಜ ಚಳ್ಳಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರವನಿತೆಯರ ಸಾಹಸಗಳನ್ನು ನಮ್ಮ ಮಕ್ಕಳಲ್ಲಿ ಬಿತ್ತಿ ಅವರನ್ನು ಸಾಧಕರನ್ನಾಗಿಸುವಲ್ಲಿ ತಾಯಂದಿರ ಪಾತ್ರ ದೊಡ್ಡದಾಗಿದೆ ಎಂದರು.

ಮಾತೃವಂದನಾ ತಾಲೂಕು ಸಂಯೋಜಕಿ ರೇಷ್ಮಾ ನೀರಲಗಿ, ‘ಬೇಟಿ ಬಚಾವೋ ಬೇಟಿ ಪಡಾವೋ’ ಕುರಿತು ಸರ್ವರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಜನ್ಮದಿನ ಆಚರಣೆ, ಮಕ್ಕಳಿಗೆ ಪೇಷಭೂಷಣ, ಬೇಟಿ ಬಚಾವೋ-ಬೇಟಿ ಪಡಾವೋ ಕೈಗೊಳ್ಳಲಾಯಿತು.

ಟಿಎಚ್​ಒ ಡಾ. ಚಂದ್ರಕಲಾ ಜೆ., ಪಿಎಲ್​ಡಿ ಬ್ಯಾಂಕ್ ನಿರ್ದೇಶಕ ರಮೇಶ ಅರಗೋಳ, ಜೆಸಿಐ ನಮ್ಮ ಸವಣೂರು ಘಟಕದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಜಂಬಗಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯ ಸಂಘದ ತಾಲೂಕಾಧ್ಯಕ್ಷೆ ಸುನಂದಾ ರೇವಣಕರ, ಅಂಗನವಾಡಿ ಮೇಲ್ವಿಚಾರಕಿ ಸುಜಾತಾ ಬೆಟಗೇರಿ, ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ಮಧುಕರ ಜಾಲಿಹಾಳ, ಪುಷ್ಪಾ ಬತ್ತಿ, ಸೋನಿಯಾ ಮೇಟಿ, ಕವಿತಾ ಬಿಕ್ಕಣ್ಣನವರ, ಲಲಿತಾ ಅಪ್ಪಣ್ಣನವರ, ಉಮಾ ಭೂಸನೂರಮಠ, ಜೂನಿಯರ್ ಜೆಸಿ ತೇಜಸ್ವಿನಿ ಹೊಳಲ ಇತರರು ಪಾಲ್ಗೊಂಡಿದ್ದರು. ಸಮಾಖ್ಯ ಕರ್ನಾಟಕ ಸಂಪನ್ಮೂಲ ವ್ಯಕ್ತಿ ಸುನಂದಾ ಚಿನ್ನಾಪೂರ ಕಾರ್ಯಕ್ರಮ ನಿರ್ವಹಿಸಿದರು.