ಜಿಲ್ಲೆ

ಯಶಸ್ವಿಯಾಗಲಿ ಅಮೃತ ಭೋಜನ

ಬಸವರಾಜ ವೀರಪ್ಪ ಗರಗ

ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣದ ಎದುರಿರುವ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಶಿಕ್ಷಕರು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಅಮೃತ ಭೋಜನ ಎಂಬ ಹೊಸ ಪರಿಕಲ್ಪನೆ ಹುಟ್ಟು ಹಾಕಿ ಮೂರು ವರ್ಷಗಳಿಂದ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ. ಸರ್ಕಾರವು ಮಧ್ಯಾಹ್ನ ಬಿಸಿಯೂಟ ನೀಡುವಂತೆ ಒಂದು ತಿಂಗಳು ಪೂರ್ತಿ ನಡೆಯುವ ಅಮೃತ ಭೋಜನ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕು ಎಂದು ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣ ಪ್ರಾರಂಭದ ದಿನವಾದ ಸೋಮವಾರ ‘ಅಮೃತ ಭೋಜನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿದೆ ಎಂದು ಕೇಳಿಬರುತ್ತಿದೆ. ಶಿಕ್ಷಕರು ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ಶಾಲಾ ದಾಖಲಾತಿ ಉತ್ತಮ ಪಡಿಸಲು ಪ್ರಯತ್ನಿಸಬೇಕು ಎಂದರು.

ನಿವೃತ್ತ ಶಿಕ್ಷಕ ಎಂ. ಎಸ್. ದಢೇಸೂರಮಠ ಮಾತನಾಡಿ, ಸರ್ಕಾರಿ ಯೋಜನೆಗಳನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಕಾಣಲು ಶಿಕ್ಷಣವೊಂದೇ ತಳಹದಿ. ಈ ಶಾಲೆಯಲ್ಲಿ ಎಲ್ಲ ಯೋಜನೆಗಳೊಂದಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಆದ್ದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಕಲಿಸಬೇಕು ಎಂದರು.

ಮುಖ್ಯ ಶಿಕ್ಷಕ ಬಿ.ಬಿ. ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್​ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಪೋತರಾಜ ಮಣ್ಣೊಡ್ಡರ, ಅಬ್ದುಲಘನಿ ಕುದರಿ, ದೀಪಾ ಈಟಿ, ಪ.ಪಂ. ಸದಸ್ಯರಾದ ರಾಚಯ್ಯ ಮಾಲಗಿತ್ತಿಮಠ, ಮುತ್ತಪ್ಪ ನೂಲ್ಕಿ, ಶಿವನಗೌಡ ಪಾಟೀಲ, ಮೈಲಾರಪ್ಪ ಚಳ್ಳಮರದ, ಅಲ್ಲಾಭಕ್ಷಿ ನದಾಫ್, ಶೇಖಪ್ಪ ಕೆಂಗಾರ, ಶೇಖಪ್ಪ ಜುಟ್ಲ, ನಿಂಗನಗೌಡ ಲಕ್ಕನಗೌಡ್ರ, ಕಳಕನಗೌಡ ಪೊಲೀಸ್​ಪಾಟೀಲ, ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಸಂತೋಷ ಮಣ್ಣೊಡ್ಡರ, ಪ್ರಕಾಶ ಪಾದಗಟ್ಟಿ, ಎ.ಎ. ನವಲಗುಂದ, ಆನಂದ ಹಾಳಕೇರಿ, ಬಸವರಾಜ ಹತ್ತಿಕಟಗಿ, ಹಟೇಲ್​ಸಾಬ್ ಲತೀಫಸಾಬನವರ, ಇತರರಿದ್ದರು. ಶಿಕ್ಷಕ ಜೆ.ಎ. ಪಾಟೀಲ, ಶಿಕ್ಷಕಿ ಎನ್.ಎಲ್. ಚವ್ಹಾಣ ಹಾಗೂ ಎಂ.ಎಸ್. ಮಾಳಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.