ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಜನತೆಯು ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಗುರು ಹೊಂದಿರಬೇಕು. ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ ಮತ್ತು ವಿವಿಧ ಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ವಿದ್ಯೆಗಳು ಜೀವನದ ಪಾಠ ನೀಡುವುದಲ್ಲದೇ ಒಳ್ಳೆ ನಾಗರಿಕನಾಗಿ ಬೆಳೆಯಲು ಉತ್ಸಾಹ ನೀಡುತ್ತವೆ ಎಂದು ಆಕಾಶವಾಣಿ ನಿವೃತ್ತ ಉಪ ಮಹಾನಿರ್ದೇಶಕ ಚೇತನಕುಮಾರ ನಾಯಕ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿರುವ 33ನೇ ಅಂತರ್ ಮಹಾವಿದ್ಯಾಲಯಗಳ ಯುವ ಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀನಿವಾಸ ಕೊಟ್ಯಾನ, ಪಾರ್ವತಿ ಕುರ್ಲೆ, ರವಿಕುಮಾರ ಮಾಳಿಗೇರ, ವೀರನಗೌಡ ಪೊಲೀಸಗೌಡರ, ಡಾ. ವಿ.ಆರ. ಕಿರೇಸೂರ, ಡಾ. ಐ.ಕೆ. ಕಾಳಪ್ಪನವರ, ಡಾ. ಭೀಮಪ್ಪ ಎ., ಡಾ. ಜೆ.ಎಸ್. ಹಿಳ್ಳಿ, ಇತರರು ಇದ್ದರು.
ಡಾ. ಪಿ.ಯು. ಕೃಷ್ಣರಾಜ ಸ್ವಾಗತಿಸಿದರು. ಡಾ. ಸರೋಜಿನಿ ಕರಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.