ಜಿಲ್ಲೆ

ಹಾವನೂರ ಗ್ರಾಮ ದೇವಿ ಜಾತ್ರೆ ಸಂಪನ್ನ

ಗುತ್ತಲ: ಸಮೀಪದ ಹಾವನೂರ ಗ್ರಾಮ ದೇವತಾ ಜಾತ್ರೆ ಬುಧವಾರ ಸಂಭ್ರಮದಿಂದ ಜರುಗಿತು. ಗ್ರಾಮ ದೇವಿಯನ್ನು ಗಡಿಗೆ ಕಳುಹಿಸುವುದರ ಮೂಲಕ ಜಾತ್ರೆ ಸಂಪನ್ನಗೊಂಡಿತು.

ಬುಧವಾರ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ದೇವಸ್ಥಾನದಿಂದ ದೇವಿಯನ್ನು ಪೆಟ್ಟಿಗೆಯಿಂದ ಹೊರ ತಂದು ಹಳಿಬಂಡಿಯ ಮೂಲಕ ದೇವಿಯನ್ನು ಚೌತಮನೆ ಕಟ್ಟೆಯವರೆಗೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಭಾರಿ ತಮಾಷೆ ಮದ್ದುಗಳನ್ನು ಹಚ್ಚಲಾಯಿತು. ಹೆಡೆ ಎತ್ತಿದ ನಾಗಸರ್ಪ, ಚಕ್ರದಲ್ಲಿ ತಿರುಗುವ ಬಾಣ, ಕಮಲದ ಹೂ, ಆಕಾಶದಲ್ಲಿ ರಂಗು ರಂಗಿನ ಮದ್ದುಗಳು, ಬಾನೆತ್ತರದಲ್ಲಿ ಹಾರುವ ಮದ್ದುಗಳನ್ನು ಭಕ್ತರು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

ಬೆಳಗ್ಗೆ 6 ಗಂಟೆ ಸುಮಾರಿಗೆ ದೇವಿಯನ್ನು ಚೌತಮನೆ ಕಟ್ಟೆಗೆ ಕುಳ್ಳರಿಸಿ ಭಕ್ತರ ದರ್ಶನಕ್ಕೆ ಇಡಲಾಯಿತು. ಭಕ್ತರು ತಮ್ಮ ಹರಕೆಯ ಮುಡುಪುಗಳನ್ನು ತೀರಿಸಿದರು.

ಸಾಂಪ್ರದಾಯಿಕ ಕೊಲ್ಲಾರಿ ಬಂಡಿಯನ್ನು (ಚಕ್ಕಡಿ)ಗಳನ್ನು ಶೃಂಗರಿಸಿಕೊಂಡು ಬಂದ ರೈತ ಸಮೂಹ ತುಂಗಭದ್ರಾ ನದಿ ತೀರದಲ್ಲಿ ವಿವಿಧ ಭಕ್ಷ್ಯಗಳನ್ನು ಸವಿದರು. ವರ್ಷಕೊಮ್ಮೆ ಕೇವಲ 13 ಗಂಟೆಗಳ ದರ್ಶನ ನೀಡುವ ದೇವಿಯ ದರ್ಶನವನ್ನು ಅಸಂಖ್ಯಾತ ಭಕ್ತರು ಪಡೆದರು. ಸಂಜೆ 5 ಗಂಟೆಗೆ ದೇವಿಯನ್ನು ಗಡಿಗೆ ಕಳಿಸಲಾಯಿತು.