ಜಿಲ್ಲೆ

ಹಾವನೂರ ಗ್ರಾಮದೇವತಾ ಜಾತ್ರೆ : ವರ್ಷಕ್ಕೆ 13 ಗಂಟೆ ಮಾತ್ರ ದರ್ಶನ ನೀಡುವ ದೇವತೆ

ಗುತ್ತಲ: ವರ್ಷಕ್ಕೆ ಕೇವಲ 13 ಗಂಟೆಗಳ ವರೆಗೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾವನೂರ ಗ್ರಾಮ ದೇವತೆಯ ಜಾತ್ರೆ ಫೆ. 5ರಂದು ವಿಜೃಂಭಣೆಯಿಂದ ಜರುಗಲಿದೆ.

ರಾಜ್ಯದ ಜಾತ್ರೆಗಳಲ್ಲಿ ಅತ್ಯಂತ ವಿಶೇಷವಾಗಿರುವ ಹಾವನೂರ ಗ್ರಾಮ ದೇವಿ ಜಾತ್ರೆಯ ದಿನ ಕೇವಲ 13 ಗಂಟೆಗಳ ವರೆಗೆ ಮಾತ್ರ ದರ್ಶನ ನೀಡುತ್ತಾಳೆ. ದೇವಿಯು ಶಾಂತ ರೂಪಿಯಾಗಿ ಗಜಗೌರಿಯ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುವಳು.

ಭಕ್ತರ ಇಷ್ಟಾರ್ಥ ಈಡೇರಿಸುವ ಗ್ರಾಮ ದೇವಿ ತಪ್ಪೆಸಗಿದವರಿಗೆ ಶಿಕ್ಷೆಯನ್ನು ಸಹ ಕೊಡುವಳೆಂಬ ಪ್ರತೀತಿ ಇದೆ. ಅನೇಕ ಮಹನೀಯರ ಆರಾಧ್ಯ ದೈವವಾಗಿರುವ ಗ್ರಾಮದ ದೇವತೆಯ ಬಗ್ಗೆ ಹಲವು ಪವಾಡಗಳು ಜರುಗಿದ್ದು, ಶಿವಮೊಗ್ಗ ಜಿಲ್ಲೆಯ ತೆಲಗಡ್ಡಿ ಗ್ರಾಮದಿಂದ ಬಂದು ಹಾವನೂರಿನಲ್ಲಿ ನೆಲೆಸಿರುವ ಬಗ್ಗೆ ಉಲ್ಲೇಖವಿದೆ.

ಹಲವು ಪವಾಡಗಳನ್ನು ಮಾಡುತ್ತ್ತ ಬಂದಿರುವ ಗ್ರಾಮದೇವತೆಯನ್ನು ಅವರಾತ್ರಿ ಅಮಾವಾಸ್ಯೆ ತರುವಾಯ ಬರುವ ಶುಕ್ರವಾರ ಗಡಿ ಜಾತ್ರೆ ನಡೆಯುತ್ತದೆ. ಗಡಿ ಜಾತ್ರೆ ನಂತರ ಬರುವ ಮಂಗಳವಾರ ಮಧ್ಯ ರಾತ್ರಿ 12ರ ನಂತರ ಪೆಟ್ಟಿಗಯಿಂದ ಹೊರ ತೆಗೆದು ಅಲಂಕಾರ ಮಾಡಿ ಬುಧವಾರ ಬೆಳಗಿನ ಜಾವ 4 ಗಂಟೆಗೆ ಚೌತಮನಿ ಕಟ್ಟಿಯಲ್ಲಿ ಪ್ರತಿಷ್ಠಾಪಿಸಿ ಸಂಜೆ 5ಕ್ಕೆ ಗಡಿಗೆ ಕಳುಹಿಸುತ್ತಾರೆ. ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುವರು.

ಕಾರ್ಯಕ್ರಮ ವಿವರ:

ಬುಧವಾರ ಬೆಳಗ್ಗೆ 4 ಗಂಟೆಗೆ ಶ್ರೀದೇವಿಯನ್ನು ದೇವಸ್ಥಾನದಿಂದ ಹಳಿ ಬಂಡಿಯಲ್ಲಿ ಶೃಂಗರಿಸಲಾಗುತ್ತದೆ. ಉತ್ಸವವು ವಿವಿಧ ವಾದ್ಯಗಳೊಂದಿಗೆ ಚವತ ಕಟ್ಟಿಗೆ ಕರೆತಂದು ಪ್ರತಿಷ್ಠಾಪಿಸಲಾಗುವುದು. ನಂತರ ದೇವಿಗೆ ಉಡಿ ತುಂಬುವುದು ಹಣ್ಣು, ಕಾಯಿ ನೈವೇದ್ಯ ಮಾಡಿಸಿ ದೇವಿಯನ್ನು ಸಂಜೆ 5 ಗಂಟೆಗೆ ಮೆರವಣಿಗೆ ಮೂಲಕ ಗಡಿಗೆ ಕಳಿಸಲಾಗುವುದು.