ಲಕ್ಷ್ಮೇಶ್ವರ: ದೀಪಾವಳಿ ಪಾಡ್ಯದ ಅಂಗವಾಗಿ ಬುಧವಾರ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ರಥೋತ್ಸವ ಸಡಗರ, ಸಂಭ್ರಮದಿಂದ ನೆರವೇರಿಸಲಾಯಿತು.
ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ ಮತ್ತು ಹನುಮಂತ ದೇವರ ಮೂರ್ತಿಯನ್ನು ಬೆಣ್ಣೆ ಮತ್ತು ವೀಳ್ಯದೆಲೆಯಿಂದ ಅಲಂಕರಿಸಲಾಗಿತ್ತು. ಸಂಜೆ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ರಥೋತ್ಸವವಕ್ಕೆ ಚಾಲನೆ ನೀಡಿದರು. ವಿವಿಧ ವಾದ್ಯಮೇಳ, ಭಜನೆಯೊಂದಿಗೆ ಜರುಗಿದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಆಂಜನೇಯ ಮಹಾರಾಜಕೀ ಜೈ, ಜೈ ಶ್ರೀರಾಮ ಘೋಷಣೆ ಮೊಳಗಿಸಿದರು.
ರಥೋತ್ಸವವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಹೂವಿನಶಿಗ್ಲಿ ಶ್ರೀಳು ಅಜ್ಞಾನ, ಅಂಧಕಾರ ಕಳೆದು ಜ್ಞಾನದ ಜ್ಯೋತಿ ಬೆಳಗಿಸುವುದು ದೀಪಾವಳಿ ಹಬ್ಬದ ವೈಶಿಷ್ಟವಾಗಿದೆ. ದೀಪವು ಧರ್ಮ, ಸಂಸ್ಕೃತಿ, ಜ್ಞಾನ ಮತ್ತು ಆಧ್ಯಾತ್ಮದ ಸಂಕೇತವಾಗಿ, ದೀಪ ಬೆಳಗಿದಂತೆ ಎಲ್ಲರ ಜೀವನದಲ್ಲಿ ಬೆಳಕು ಪ್ರಜ್ವಲಿಸಬೇಕು, ಸಮಾಜದಲ್ಲಿ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಕೆಲಸ ಮಾಡಬೇಕೆ ಹೊರತು ಕತ್ತಲೆಗೆ ತಳ್ಳುವ ಕಾರ್ಯವನ್ನು ಮಾಡಬಾರದು, ಜಾತ್ರೆ ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತಿಕವಾಗಿದ್ದು, ಪ್ರತಿಯೊಂದು ಹಬ್ಬಕ್ಕೂ ಧಾರ್ಮಿಕ ಹಿನ್ನಲೆ ಇದೆ, ಈ ನಿಟ್ಟಿನಲ್ಲಿ ಇಲ್ಲಿನ ಹಾವಳಿ ಹನುಮಂತ ದೇವರು ವಿಶೇಷ ಶಕ್ತಿ ಹೊಂದಿದ ಜಾಗೃತ ದೇವರಾಗಿದ್ದು, ಇಲ್ಲಿನ ಭಕ್ತರು ಹಮ್ಮಿಕೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ ಎಂದು ನುಡಿದರು.
ಶಾಸಕ ಡಾ.ಚಂದ್ರು ಲಮಾಣಿ, ಈಶ್ವರಪ್ಪ ಕುಂಬಾರ, ನೀಲಪ್ಪ ಕರ್ಜೇಕಣ್ಣವರ, ನಾಗರಾಜ ಚಿಂಚಲಿ, ನಿಂಗಪ್ಪ ಬನ್ನಿ, ಮಹೇಶ ಹೊಗೆಸೊಪ್ಪಿನ, ಸುನೀಲ ಮಹಾಂತಶೆಟ್ಟರ, ವಿಜಯಕುಮಾರ ಹತ್ತಿಕಾಳ, ಫಕೀರೇಶ ಅಣ್ಣಿಗೇರಿ, ಸುನೀಲ ಮುಳಗುಂದ, ಮಲ್ಲಿಕಾರ್ಜುನ ಮುಳಗುಂದ, ಶೇಖಪ್ಪ ಕರ್ಜೆಕಣ್ಣವರ, ಮಾಂತೇಶ ಗೋಡಿ, ನವೀನ ಕುಂಬಾರ, ಮಲ್ಲಪ್ಪ ಚಕ್ರಸಾಲಿ, ಬಸವರಾಜ ಚಕ್ರಸಾಲಿ, ಮಂಜುನಾಥ ಕೊಡಳ್ಳಿ, ಜಗದೀಶ ಕುಂಬಾರ, ಈರಣ್ಣ ಪೂಜಾರ, ಅರ್ಚಕ ಮುರಘೇಂದ್ರಸ್ವಾಮಿ ಹಿರೇಮಠ, ಭರಮಪ್ಪ ಅಣ್ಣಿಗೇರಿ ಹಾಗೂ ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ, ಹಾವಳಿ ಆಂಜನೇಯ ಭಜನಾ ಮಂಡಳಿ, ಯುವಕ ಮಂಡಳಿ ಸದಸ್ಯರು ಇತರರು ಪಾಲ್ಗೊಂಡಿದ್ದರು.