ಬಲಭೀಮರಾವ್ ಕುಲಕರ್ಣಿ
ಹಟ್ಟಿಚಿನ್ನದಗಣಿ: ಜಿಲ್ಲೆಯ ವಿವಿಧ ಗಣಿಗಳಿಂದ ರಾಜಧನದ ರೂಪದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ (ಡಿಎಂಎಫ್) ಹಣ ಸಂದಾಯವಾಗುತ್ತದೆ. ಆದರೆ, ಕಳೆದ ಎರಡು ವರ್ಷಗಳಿಂದ ಹಟ್ಟಿ ಭಾಗದಲ್ಲಿ ಅಭಿವೃದ್ಧಿಗೆ ಡಿಎಂಎಫ್ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಹಟ್ಟಿಚಿನ್ನದಗಣಿ ಒಳಗೊಂಡಂತೆ ಜಿಲ್ಲೆಯ ನಾನಾ ಗಣಿ ಕಂಪನಿಗಳು ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಡಿಎಂಎಫ್‌ಗೆ ರಾಜಧನ ಸಂದಾಯ ಮಾಡುತ್ತವೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಶಾಸಕರು ಸಮಿತಿ ಸದಸ್ಯರಾಗಿದ್ದು, ಸಭೆ ನಡೆಸಿ ಶಾಲೆ, ಕಾಲೇಜು, ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಹಟ್ಟಿ ಭಾಗದ ವಿವಿಧ ಶಾಲೆ, ಕಾಲೇಜುಗಳ ಕೊಠಡಿ ನಿರ್ಮಾಣ, ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಳೆದ ಬಿಜೆಪಿ ಸರ್ಕಾರದಲ್ಲಿ ಅನುದಾನ ಒದಗಿಸಲಾಗಿತ್ತು. ಈ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಕಳೆದ ಒಂದೂವರೆ ವರ್ಷದಿಂದ ಡಿಎಂಎಫ್‌ನಿಂದ ನಯಾಪೈಸೆ ಅನುದಾನ ಬಂದಿಲ್ಲ. ಇದರಿಂದ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗಿದೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಕೊಕ್ಕೆ ಬಿದ್ದಿದ್ದು, ಡಿಎಂಎಫ್ ಅನುದಾನ ಕೂಡ ಬಿಡುಗಡೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಡಿಎಂಎಫ್ ಅನುದಾನವನ್ನೂ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಗಣಿ ಕಂಪನಿಯಿಂದ ಜಿಲ್ಲಾ ಖನಿಜ ನಿಧಿಗೆ ಸಲ್ಲಿಸಲಾಗಿರುವ ಅನುದಾನವನ್ನು ಸ್ಥಳಿಯವಾಗಿ ಸದ್ಬಳಕೆ ಮಾಡಬೇಕು. ಜಿಲ್ಲೆಯ ವಿವಿಧ ಗಣಿಗಾರಿಕೆ ಕಂಪನಿಗಳಿಂದ ಜಿಲ್ಲಾ ಖನಿಜ ಪ್ರತಿಷ್ಠಾಪನೆಗೆ ಜಮಾ ಆಗಿರುವ ಹಣವನ್ನು ಬೇರೆಡೆ ವರ್ಗವಾಗದಂತೆ ಸಂಬಂಧಪಟ್ಟವರು ನಿಗಾ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಾನು ಶಾಸಕನಾದ ಬಳಿಕ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಡಿಎಂಎಫ್ ಅನುದಾನದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತ ಸಭೆ ಕೂಡ ನಡೆಸಿಲ್ಲ. ಕಂಪನಿಗಳು ರಾಜಧನ ನೀಡಿಲ್ಲವೋ ಅಥವಾ ಸರ್ಕಾರ ಅನುದಾನವನ್ನು ಬೇರೆಡೆ ವರ್ಗ ಮಾಡಿದೆಯೋ ತಿಳಿದಿಲ್ಲ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಲು ಕ್ರಮವಹಿಸಲಾಗುವುದು.| ಮಾನಪ್ಪ ಡಿ.ವಜ್ಜಲ್ ಶಾಸಕ, ಲಿಂಗಸುಗೂರು
ಡಿಎಂಎಫ್ ಅನುದಾನವನ್ನು ಕಡ್ಡಾಯವಾಗಿ ಸ್ಥಳೀಯ ಅಭಿವೃದ್ಧಿಗೆ ಬಿಡುಗಡೆ ಮಾಡಬೇಕು. ಅನುದಾನ ಮಂಜೂರಿಗೆ ವಿಳಂಬ ಇಲ್ಲವೇ ಬೇರೆಡೆ ವರ್ಗಾಯಿಸುವುದು ಸಲ್ಲದು. ಸದರಿ ವಿಷಯವನ್ನು ಶಾಸಕರು, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು.| ಆರ್.ಮಾನಸಯ್ಯ ಹಟ್ಟಿಚಿನ್ನದಗಣಿ ಕಂಪನಿ ಕಾರ್ಮಿಕರ ಸಂಘದ ಮಾಜಿ ಗೌರವಾಧ್ಯಕ್ಷ
ನಾನು ಶಾಸಕನಾಗಿದ್ದಾಗ ಡಿಎಂಎಫ್ ಅನುದಾನ ಬಿಡುಗಡೆಯಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ಅನುದಾನ ಬಿಡುಗಡೆೆಯಾಗದಿರುವ ಕುರಿತು ಜಿಲ್ಲಾಡಳಿತ, ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಒತ್ತಾಯಿಸುವೆ.| ಡಿ.ಎಸ್ ಹೂಲಗೇರಿ ಮಾಜಿ ಶಾಸಕ, ಲಿಂಗಸುಗೂರು
ಡಿಎಂಎಫ್ ಅನುದಾನ ಕುರಿತು ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಕ್ರಮಕೈಗೊಳ್ಳಲಿದ್ದಾರೆ. ಲಿಂಗಸುಗೂರು ತಾಲೂಕಿಗೆ ಬರುವ ಅನುದಾನದ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಶಾಸಕರಿಗೆ ಮಾಹಿತಿ ನೀಡಲಾಗುವುದು. ಅನುದಾನ ಬಿಡುಗಡೆಯಾದರೆ ನಿಯಮಾನುಸಾರ ಕ್ರಮವಹಿಸಲಾಗುವುದು.| ಶಂಶಾಲಂ ಲಿಂಗಸುಗೂರು ತಹಸೀಲ್ದಾರ್.