ಹಟ್ಟಿಚಿನ್ನದಗಣಿ: ಭಾರತ ಜೋಡೋ ಪಾದಯಾತ್ರೆ ಅನುಸರಿಸಿ ಲಿಂಗಸುಗೂರು ಜೋಡೊಯಾತ್ರೆ ಮೂಲಕ 108 ಕಿ.ಮೀ. ಕ್ರಮಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಎಚ್.ಬಿ.ಮುರಾರಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಾದಯಾತ್ರೆ ಮೂಲಕ ಜನರ ಸಮಸ್ಯೆ ಆಲಿಸುವುದರೊಂದಿಗೆ ಪಕ್ಷ ಸಂಘಟನೆ ಬಲಪಡಿಸಲಾಗುತ್ತಿದೆ. ಶಾಸಕ ಡಿ.ಎಸ್ ಹೂಲಗೇರಿಯಿಂದ ಅಂತರ ಕಾಯ್ದುಕೊಂಡು ಪಕ್ಷ ಸಂಘಟಿಸಲಾಗುತ್ತಿದೆ ಎಂದರು.
ಆರ್.ರುದ್ರಯ್ಯ ಸೇರಿದಂತೆ ಯಾರಿಗೂ ಪಕ್ಷ ಟಿಕೆಟ್ ನೀಡುವ ಭರವಸೆ ನೀಡಿಲ್ಲ. ವಲಸಿಗರು 15 ವರ್ಷ ನಮ್ಮ ಕ್ಷೇತ್ರದ ಶಾಸಕರಾಗಿದ್ದು, ಯಾವುದೇ ಅಭಿವೃದ್ಧಿ ಮಾಡಿಲ್ಲ. ತಾಲೂಕಿನಲ್ಲಿ ಬಹುಸಂಖ್ಯಾತರಾದ ಮಾದಿಗ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಸೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ನ್ಯಾಯ, ಅಭಿವೃದ್ಧಿ ಪರ ಚಿಂತನೆ ಇರುವವರಿಗೆ ಸ್ಪಂದಿಸುವ ಭರವಸೆ ಇದೆ ಎಂದು ಎಚ್.ಬಿ.ಮುರಾರಿ ವಿಶ್ವಾಸ ವ್ಯಕ್ತಪಡಿಸಿದರು. ತಾಪಂ ಮಾಜಿ ಉಪಾಧ್ಯಕ್ಷ ಜೆ.ಬಾಬು, ಮಾದಿಗ ಜಾಗೃತಿ ಯುವ ಸೇನೆ ಅಧ್ಯಕ್ಷ ವಿಜಯ ಕುಮಾರ, ನಿಂಗಪ್ಪ ದೊಡ್ಡಮನಿ ಇದ್ದರು.