ಮೈಸೂರು: ರಾಜಕಾರಣದಲ್ಲಿ ಭ್ರಷ್ಟರು, ಅನ್‌ಪಡ್‌ಗಳಿದ್ದು(ಅನಕ್ಷರಸ್ಥ) ಹಣ ಬಲದಿಂದ ಪೈಪೋಟಿ ನಡೆಯುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ದ್ವೇಷ, ಅಸೂಯೆ ಇದ್ದದ್ದೆ ಎಂದು ಸಂಸದ ಪ್ರತಾಪ ಸಿಂಹ ಬೇಸರ ವ್ಯಕ್ತಪಡಿಸಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎಂಎಲ್‌ಎ ಆದ ಮೇಲೆ ಮಂತ್ರಿ ಆಗಬೇಕು ಅನ್ನಿಸುತ್ತೆ. ಮಂತ್ರಿ ಆದ ಮೇಲೆ ಸಿಎಂ ಕುರ್ಚಿ ಕಾಣುತ್ತೆ. ಕೇಂದ್ರದ ರಾಜಕಾರಣಕ್ಕೆ ಹೋಗಿ, ಅಲ್ಲಿ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದರೂ ರಾಜ್ಯದ ಮುಖ್ಯಮಂತ್ರಿ ಕುರ್ಚಿಯ ಆಸೆ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಆಸೆ ಎಲ್ಲರಿಗೂ ಸಹಜ. ಆದರೆ ನಾನು ಇದ್ಯಾವುದಕ್ಕೂ ಆಸೆಪಡದೆ ಜನರಿಗೋಸ್ಕರ, ಅವರ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೋಸ್ಕರ ರಾಜಕಾರಣದಲ್ಲಿ ಇರಬೇಕು ಎನ್ನುತ್ತಿದ್ದೇನೆ ಎಂದರು.
ಸಾಯುವತನಕ ರಾಜಕಾರಣ ಮಾಡುವ ಆಸೆ ನನಗಿಲ್ಲ. ದೇಶಕ್ಕೆ ನರೇಂದ್ರ ಮೋದಿ ಬೇಕು. ನಾಳೆ ನಾನು ಸತ್ತರೂ ನನ್ನ ಕೆಲಸಗಳು ನನ್ನ ಬಗ್ಗೆ ಹೇಳಬೇಕು. ನನ್ನ ಜನ್ಮಭೂಮಿ ಮೈಸೂರು ಅಲ್ಲ. ಆದ್ರೆ ನನ್ನ ಕರ್ಮಭೂಮಿ, ರುದ್ರಭೂಮಿ ಮೈಸೂರೇ ಎಂದು ಭಾವುಕರಾದರು.
ಕೊಡಗು, ಮೈಸೂರು ನನ್ನ ಮನೆ ಇದ್ದ ಹಾಗೆ. ಇಲ್ಲಿ ಎಲ್ಲ ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಮೋದಿ ಅವರು ನನಗೆ ಸಂಸದನಾಗಲು ಅವಕಾಶವನ್ನೇ ಮಾಡಿಕೊಟ್ಟಿಲ್ಲದಿದ್ದರೆ ಕೆಲಸ ಮಾಡಲು ಅವಕಾಶವೇ ಇರುತ್ತಿರಲಿಲ್ಲ. ಹತ್ತು ವರ್ಷದಲ್ಲಿ ಹೆಚ್ಚು ಕೆಲಸಗಳನ್ನು ಮಾಡಿದ್ದಾರೆ. ಇನ್ನು ಐದು ವರ್ಷ ಇದ್ದರೆ ಇನ್ನೂ ಒಳ್ಳೇ ಕೆಲಸ ಮಾಡುತ್ತಾರೆ ಅನ್ನೋ ಭರವಸೆ ಇದೆ ಎಂದರು.
ಮೊದಲ ಅವಧಿಯಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಬೇಕು ಎನ್ನುವುದನ್ನು ತಿಳಿದುಕೊಂಡೆ, ಎರಡನೇ ಅವಧಿಯಲ್ಲಿ ಎಲ್ಲರೂ ಮಾಡಬೇಕಾಗಿರುವ ಕೆಲಸಗಳನ್ನು ತನ್ನ ತಲೆ ಮೇಲೆ ಹೊತ್ತುಕೊಂಡು ಮಾಡಿಸಿದ್ದೇನೆ ಎಂದರು.
ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಮಾತನಾಡಿ, ಬಿಜೆಪಿಯಲ್ಲಿ ಇತ್ತೀಚೆಗೆ ರಾಜ ಮನೆತನಗಳಿಗೆ ಟಿಕೆಟ್ ನೀಡುವುದು ಹೆಚ್ಚಾಗಿದೆ. ರಾಜಮನೆತನದವರು ಏನೋ ಮಾಡಿಬಿಡುತ್ತಾರೆ ಅನ್ನುವ ಪರಿಕಲ್ಪನೆ ಅವರಿಗೆ ಬಂದಿರಬೇಕು. ಯಾರು ಚೆನ್ನಾಗಿ ಕೆಲಸ ಮಾಡಿದ್ದಾರೋ ಅವರಿಗೆ ಟಿಕೆಟ್ ಕೊಡಿ. ಇವರಿಗಿಂತ ಉತ್ತಮರಿದ್ದರೆ ಟಿಕೆಟ್ ಕೊಡಿ ಬೇಡ ಅನ್ನಲ್ಲ ಎಂದರು.
ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ನಟರಾಜ ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ , ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಹಿರಿಯ ಸಾಹಿತಿ ಬನ್ನೂರು ಕೆ.ರಾಜು, ಉದ್ಯಮಿ ಎಸ್.ಪಿ.ನಾಗೇಶ್, ತೇಜಸ್ ಲೋಕೇಶ್ ಗೌಡ ತರರು ಇದ್ದರು.
ಮಾತಿನ ನಡುವೆ ಫೋನ್‌ಕಾಲ್
ಹತ್ತು ನಿಮಿಷ ಗೌಪ್ಯ ಮಾತು
ಸನ್ಮಾನ ಸ್ವೀಕರಿಸಿದ ಬಳಿಕ ಮಾತು ಆರಂಭಿಸಿದ ಪ್ರತಾಪಸಿಂಹ ಅವರು ಮಾತಿನ ಮಧ್ಯೆ ಮೊಬೈಲ್ ಕರೆ ಬಂದಿದ್ದರಿಂದ ಸಭೆಯಿಂದ ಕೊಠಡಿಗೆ ತೆರಳಿ ಹತ್ತು ನಿಮಿಷ ಗೌಪ್ಯ ಮಾತುಕತೆ ನಡೆಸಿದರು.
ಭಾಷಣ ಮಾಡುತ್ತಿರುವಾಗಲೇ ತಮ್ಮ ಮೊಬೈಲ್ ಕಡೆ ದೃಷ್ಟಿ ಹಾಯಿಸಿದ ಅವರು, ಮುಖ್ಯವಾದ ಕರೆ ಕ್ಷಮಿಸಿ ಎನ್ನುತ್ತ ಗಲಿಬಿಲಿಯಿಂದ ಎದ್ದು, ಪತ್ರಕರ್ತರ ಸಭಾಂಗಣದಲ್ಲಿ ಇರುವ ಕಂಪ್ಯೂಟರ್ ಕೊಠಡಿ ಒಳಗೆ ಹೋಗಿ ಬಾಗಿಲು ಮುಚ್ಚಿದರು.
ಹತ್ತು ನಿಮಿಷಗಳ ಬಳಿಕ ಹೊರ ಬಂದ ಅವರು, ಮತ್ತೆ ಮಾತಿಗೆ ಶುರು ಮಾಡಿದ ಅವರು ಕೆಲ ಹೊತ್ತಿಗೆ ಭಾಷಣ ಮುಗಿಸಿದರು. ವೇದಿಕೆ ಇಳಿದು ಬಂದ ಅವರನ್ನು ‘ದೂರವಾಣಿ ಮೂಲಕ ಏನಾದರೂ ಖುಷಿಯ ಸಮಾಚಾರ ಬಂತೆ’ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಕೇವಲ ನಕ್ಕು ಮುನ್ನಡೆದರು.