ಧಾರವಾಡ: ದ್ವೇಷ ಭಾವನೆ ಮೂಡಿಸುವ ಹೇಳಿಕೆ ನೀಡಿದ ಆರೋಪದ ಮೇಲೆ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ ೨ರಂದು ಸಂಜೆ ನವಲಗುಂದದ ಗಾಂಧಿ ಮಾರ್ಕೆಟ್‌ನಲ್ಲಿ ಕಾಂಗ್ರೆಸ್‌ನಿಂದ ಸ್ವಾಭಿಮಾನಿ ಮತದಾರರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಮತದಾರರನ್ನು ಉದ್ದೇಶಿಸಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, 'ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ತಮ್ಮ ಜಾತಿಯವರನ್ನು ಪ್ರೀತಿ ಮಾಡಿದಷ್ಟು ಬೇರೆ ಜಾತಿಯವರನ್ನು ಪ್ರೀತಿ ಮಾಡುವುದಿಲ್ಲ. ಈ ಪಾಪಿಯನ್ನು ಹೊರಗೆ ಹಾಕುವವರೆಗೆ ನಮಗೆ ಸಮಾಧಾನ ಇಲ್ಲ. ಮೊದಲು ಎಲ್ಲಾ ಜಾತಿಯವರು ಭಸ್ಮ ಹಚ್ಚಿಕೊಳ್ಳುತ್ತಿದ್ದರು. ಭಸ್ಮ ಹೋಗಿ ಕುಂಕುಮ ಬಂತು. ಭಂಡಾರ ಹೋಗಿ ಕುಂಕುಮ ಬಂತು. ನಮಸ್ಕಾರ, ಶರಣು ಶರಣಾರ್ಥಿ ಹೋಗಿ ಹರಿಓಂ, ಜೈಶ್ರೀರಾಮ್ ಬಂತು. ನಾವು ಬದುಕಿಯೂ ಉಪಯೋಗ ಇಲ್ಲ. ಈ ಸಮಾಜದಲ್ಲಿ ಹುಟ್ಟಿ ಉಪಯೋಗ ಇಲ್ಲ ಎನ್ನುವಂಥ ಪರಿಸ್ಥಿತಿ ಬಂದ ಮೇಲೆ ಅನಿವಾರ್ಯ ವಾಗಿ ಹೊರಗೆ ಬಂದಿದ್ದೇವೆ.' ಚುನಾವಣೆ ಸಂದರ್ಭದಲ್ಲಿ ಜಾತಿ, ಸಮುದಾಯ, ಧರ್ಮದ ಹೆಸರಿನಲ್ಲಿ ನಾಗರಿಕರ ಮಧ್ಯೆ ವೈರತ್ವ, ದ್ವೇಷ ಭಾವನೆ ಉಂಟು ಮಾಡುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಚುನಾವಣಾ ಸಿಬ್ಬಂದಿ ಆರ್. ಕುಮಾರಸ್ವಾಮಿ ನೀಡಿದ ದೂರಿನ ಮೇರೆಗೆ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜೆಪಿಯ ಪ್ರಲ್ಹಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಘೋಷಿಸಿದ್ದ ಶ್ರೀಗಳು, ಪಕ್ಷೇತರರಾಗಿ ಧಾರವಾಡ ಲೋಕಸಭೆ ಚುನಾವಣಾ ಕಣಕ್ಕಿಳಿದಿದ್ದರು. ನಂತರ ನಾಮಪತ್ರ ವಾಪಸ್ ಪಡೆದಿದ್ದರು.