ಶಿವಮೊಗ್ಗ: ದ್ವೇಷ ರಾಜಕಾರಣದಿಂದ ರಾಜ್ಯ ಸರ್ಕಾರ ಕೆಲ ಪಠ್ಯಗಳನ್ನು ಕೈಬಿಟ್ಟಿರುವುದು ಹಾಗೂ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಣ ನೀತಿಯ ರದ್ದತಿಗೆ ಮುಂದಾಗಿರುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.
ಕೆಲವು ಪಠ್ಯಗಳನ್ನು ಕೈಬಿಟ್ಟಿರುವುದಕ್ಕೆ ಕಾರಣ ನೀಡುವಂತೆ ಪರಿಷತ್ ಕಲಾಪದ ವೇಳೆ ಸರ್ಕಾರಕ್ಕೆ ಕೋರಿದ್ದೆ. ಅವರು ನೀಡಿರುವ ಕಾರಣಗಳು ಹಾಸ್ಯಾಸ್ಪದವಾಗಿವೆ ಮತ್ತು ಕೆಲವು ಆತಂಕಕಾರಿಯಾಗಿಯೂ ಇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಚಕ್ರವರ್ತಿ ಸೂಲಿಬೆಲೆ ಬರೆದ ಪಠ್ಯದಲ್ಲಿ ರಾಜಗುರು, ಸುಖದೇವ್, ಭಗತ್ ಸಿಂಗ್ ಅವರ ಹೋರಾಟದ ಬಗ್ಗೆ ಉಲ್ಲೇಖವಿತ್ತು. ಅದನ್ನು ಕೈಬಿಡಲಾಗಿದೆ. ಕೇಶವ ಬಲಿರಾಮ ಹೆಡ್ಗೇವಾರ್ ಲೇಖನವನ್ನು ಆಧರಿಸಿದ ಪಠ್ಯವನ್ನು ಬಿಟ್ಟಿದ್ದಾರೆ. ಕೇವಲ ಬಲಪಂಥೀಯರು ಎಂಬ ಕಾರಣಕ್ಕೆ ಇವರಿಬ್ಬರ ಪಠ್ಯಗಳನ್ನು ಕೈಬಿಡಲಾಗಿದೆ ಎಂದು ದೂರಿದರು.
ಪಠ್ಯಗಳನ್ನು ಸೇರಿಸುವ ಇಲ್ಲವೇ ಕೈಬಿಡುವ ಮುನ್ನ ಶಿಕ್ಷಣ ತಜ್ಞರ ಸಭೆ ನಡೆಸಿ ಅಭಿಪ್ರಾಯ ಕೇಳಬೇಕು. ಆದರೆ ಸಚಿವ ಸಂಪುಟದಲ್ಲೇ ಇದನ್ನು ತೀರ್ಮಾನ ಮಾಡುತ್ತಾರೆ. ಕೆಪಿಸಿಸಿಯಲ್ಲಿ ಒಂದು ವಿಭಾಗ ಸರ್ಕಾರಕ್ಕೆ ವರದಿ ನೀಡಿ ಯಾವ ಪಠ್ಯವನ್ನು ತೆಗೆಯಬೇಕೆಂದು ತಿಳಿಸುತ್ತದೆ. ಅದಕ್ಕೆ ತಕ್ಕಂತೆ ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯನಿರ್ವಹಿಸುತ್ತಾರೆ ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಸುತ್ತಲೂ ಇರುವವರು ಶಿಕ್ಷಣ ತಜ್ಞರಲ್ಲ. ಬದಲಿಗೆ ಎಡಪಂಥೀಯರು. ಅವರ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಮಕ್ಕಳ ಭವಿಷ್ಯವನ್ನು ಅಪಾಯಕ್ಕೆ ದೂಡಲು ಸರ್ಕಾರ ಮುಂದಾಗುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.
ಕೇಂದ್ರದಲ್ಲಿ ಅನೇಕ ದಶಕ ಇದ್ದ ಕಾಂಗ್ರೆಸ್ ಸರ್ಕಾರ ಶಿಕ್ಷಣ ನೀತಿಯನ್ನು ಹಲವು ಬಾರಿ ಬದಲಾವಣೆ ಮಾಡಿದೆ. ಈಗ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಹಂತ ಹಂತವಾಗಿ ಜಾರಿಯಾಗುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಎನ್‌ಇಪಿ ರದ್ದತಿಯ ಮಾತನಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಮೇಯರ್ ಎಸ್.ಶಿವಕುಮಾರ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.