ಎಂ.ಕೆ.ಹುಬ್ಬಳ್ಳಿ: ಕೇಂದ್ರ ಸರ್ಕಾರವು ರಾಹುಲ್ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಿತ್ತೂರು ಕಾಂಗ್ರೆಸ್ ವತಿಯಿಂದ ಪಟ್ಟಣದ ಮಹಾತ್ಮ ಗಾಂಧಿ ಚಿತಾಭಸ್ಮ ಸ್ಮಾರಕದ ಬಳಿ ಬುಧವಾರ ಜಮಾಯಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವೌನ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ, ಗಾಂಧಿ ಕುಟುಂಬದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ ಕುಟುಂಬದ ರಾಹುಲ್ ವಿರುದ್ಧ ಬಿಜೆಪಿ ಅನುಸರಿಸುತ್ತಿರುವ ನಡೆ ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಕಿತ್ತೂರು ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ರಾಹುಲ್ ಗಾಂಧಿ ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಕೇಂದ್ರದ ಬಿಜೆಪಿ ನಡೆಸುತ್ತಿರುವ ದ್ವೇಷ ರಾಜಕಾರಣ ಸರಿಯಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬರನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು.
ಜಿಪಂ ಮಾಜಿ ಸದಸ್ಯ ಎಫ್.ಎಫ್.ಸಕ್ರೆನ್ನವರ, ಪಪಂ ಸದಸ್ಯ ಸುಬಾನಿ ಅಗಸಿಬಾಗಿಲ, ಮಲ್ಲಪ್ಪ ನಾಗನೂರ, ಆನಂದ ಗಡಾದ, ರೋಹಿಣಿ ತಾಯಿ ಅಭಿಮಾನಿ ಬಳಗದ ಅಧ್ಯಕ್ಷ ದೊಡ್ಡಗೌಡ ಹುಚ್ಚಗೌಡ್ರ, ಪುಟ್ಟು ಪಟ್ಟಣಶೆಟ್ಟಿ, ಗಿರೀಶ ಕುಲಕರ್ಣಿ, ಸಿದ್ದಪ್ಪ ಗೋರಕೊಳ್ಳಿ ಸೇರಿ ಪಟ್ಟಣದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.