ಕೊಳ್ಳೇಗಾಲ: ಡಿ.7 ರಂದು ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
7 ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಗ್ರಾಮದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮರಿಸ್ವಾಮಿ ಹಾಗೂ ಇತರ ದಾನಿಗಳು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಲಕ್ಷ್ಮಮ್ಮ ಸೂಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಲಿದ್ದಾರೆ. ಆದರೆ, ಶಾಲೆಯ ಮುಂಭಾಗದ ರಸ್ತೆ ರಾಡಿ ಬಿದ್ದು ಸಂಪೂರ್ಣ ಹದಗೆಟ್ಟಿದ್ದು. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಆರ್.ಮಂಜುನಾಥ್ ನಿರ್ದೇಶನದಂತೆ ಶಾಲೆಯ ಮುಂಭಾಗ ದಲ್ಲಿ ಸುಗಮ ಸಂಚಾರಕ್ಕೆ 240 ಮೀ. ವೆಟ್‌ಮಿಕ್ಸ್ ರಸ್ತೆ ಕಾಮಗಾರಿಯನ್ನು ಪಂಚಾಯತ್ ರಾಜ್ ಇಲಾಖೆಯ ತಾಂತ್ರಿಕ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಕಾಶ್ ಅವರು ತರಾತುರಿಯಲ್ಲಿ ನಡೆಸುತ್ತಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಪಟ್ಟಣದ ನ್ಯಾಷನಲ್ ಮೈದಾನ ಆವರಣದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತ್ಯುತ್ಸವ ನಡೆಯಲಿದ್ದು. ಕಾರ್ಯಕ್ರಮದಲ್ಲಿ ಸಿಎಂ, ಸಚಿವರು ಹಾಗೂ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪಾಲ್ಗೊ ಳ್ಳಲಿದ್ದು, ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಬೃಹತ್ ವೇದಿಕೆ ಸಜ್ಜುಗೊಳ್ಳುತ್ತಿದೆ. ನಂತರ, ಯಳಂದೂರು ತಾಲೂಕಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪ ಹಾಗೂ ಟಿಎಪಿಎಂಎಸ್ ಹಾಲ್‌ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅತಿಗಣ್ಯರಿಗೆ ಜೆಎಸ್‌ಎಸ್ ಕಾಲೇಜಿನ ಆವರಣದಲ್ಲಿ ಊಟ-ಉಪಚಾರ ವ್ಯವಸ್ಥೆ ಮಾಡಲಾಗುತ್ತಿದೆ. ವಾಹನಗಳಿಗೆ ಪಾರ್ಕಿಂಗ್ ಜಾಗವನ್ನು ಪೊಲೀಸ್ ಇಲಾಖೆ ಗುರುತಿಸಿದೆ.
ರಸ್ತೆ ಗುಂಡಿಗೆ ತೇಪೆ: ಸತ್ತೇಗಾಲದಿಂದ ಕೊಳ್ಳೇಗಾಲ ಪಟ್ಟಣದವರೆಗಿನ ರಾಷ್ಟ್ರೀಯ ಹೆದ್ದಾರಿ ( 209) ಗುಂಡಿಗಳಿಗೆ ನ್ಯಾಷನಲ್ ಹೈವೇ ಅಧಿಕಾರಿಗಳು ತೇಪೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಇಷ್ಟೆಲ್ಲ ಕೆಲಸಗಳು ಭರದಿಂದ ಸಾಗಿವೆ.
ಸಿಎಂ ಸಿದ್ದರಾಮಯ್ಯ ಅವರ ಆಗಮನದ ಹಿನ್ನೆಲೆಯಲ್ಲಿ ಸತ್ತೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ತರಾತುರಿಯಲ್ಲಿ ವೆಟ್‌ಮಿಕ್ಸ್ ರಸ್ತೆ ಕಾಮಗಾರಿ ನಡೆಸುತ್ತಿದೆ.