ಜಿಲ್ಲೆ

ದರ್ಶನೋತ್ಸವದಲ್ಲಿ ಹಾಸನಾಂಬ ಚಲನಚಿತ್ರೋತ್ಸವ

ಹಾಸನ: ಹಾಸನಾಂಬ ದರ್ಶನ ಸಂದರ್ಭದಲ್ಲಿಯೇ ಮೊದಲ ಬಾರಿಗೆ ಹಾಸನಾಂಬ ಚಲನಚಿತ್ರೋತ್ಸವವನ್ನು ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.

ಹಾಸನ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್‌ಟೈನ್‌ಮೆಂಟ್ ಮತ್ತು ವೆಂಚರ್ ಮೂವೀಸ್ ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಾಸನಾಂಬ ಚಲನಚಿತ್ರೋತ್ಸವ-2025 ಅನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕಿರು ಚಿತ್ರಗಳ ಚಲನಚಿತ್ರೋತ್ಸವ ಏರ್ಪಾಡು ಮಾಡುವ ಮೂಲಕ ಹಾಸನದ ಹಿರಿಮೆಯನ್ನು ಸಾಂಸ್ಕೃತಿಕವಾಗಿ ಹೆಚ್ಚಿಸಲು ಹೊಸ ಪ್ರಯತ್ನ ಮಾಡಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಾವಿದರಿಗೆ ಹಾಸನ ಜನ್ಮ ನೀಡಿದ ಭೂಮಿ. ಹಾಸನದ ದನಗಳ ಜಾತ್ರೆ ಒಂದು ಕಾಲಕ್ಕೆ ನಾಡಿಗೆ ಹೆಸರುವಾಸಿ. ಇಂಥ ನೆಲದಲ್ಲಿ ಕಿರು ಚಿತ್ರೋತ್ಸವ ನಡೆಯುತ್ತಿರುವುದು ಅಭಿನಂದನಾರ್ಹ ಎಂದರು.

ಎರಡು ದಿನಗಳ ಕಾಲ ನಡೆದ ಚಲನಚಿತ್ರೋತ್ಸವದಲ್ಲಿ 10 ಕಿರುಚಿತ್ರಗಳು, 2 ವಿಶೇಷ ಕಿರುಚಿತ್ರಗಳು ಹಾಗೂ 3 ಕನ್ನಡ ಚಲನಚಿತ್ರಗಳು ಪ್ರದರ್ಶನಗೊಂಡವು. ಪ್ರೇಕ್ಷಕರಿಂದ ಉತ್ತಮ ಉತ್ಸಾಹಭರಿತ ಪ್ರತಿಕ್ರಿಯೆ ದೊರೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಹಾಸನ ಮಹಾನಗರ ಪಾಲಿಕೆ ಉಪ ಮೇಯರ್ ಹೇಮಲತಾ ಕಮಲ್ ಕುಮಾರ್, ನಗರಸಭೆ ಮಾಜಿ ಸದಸ್ಯ ಕಮಲ್ ಕುಮಾರ್, ತೌಫಿಕ್ ಅಹಮ್ಮದ್ ಹಾಗೂ ಆಯೋಜಕ ಗುರುಪ್ರಸಾದ್ ಇತರರು ಇದ್ದರು.

ವಿಭಿನ್ನ ವಿಭಾಗಗಳಲ್ಲಿ ಆಯ್ಕೆಯಾದ ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿಗಳನ್ನು ಶಿವಾನಂದ ತಗಡೂರು ಪ್ರದಾನ ಮಾಡಿದರು. ಬಳಿಕ ಸಾಧಕರಿಗೆ ಸನ್ಮಾನಿಸಲಾಯಿತು. ಆಯೋಜನಾ ಸಮಿತಿಯ ಗುರು ಪ್ರಸಾದ್, ಸ್ಟಾನಿ ಜೋಯ್ಸನ್, ಶಕೀಲ್ ಅಹಮ್ಮದ್, ಪ್ರಶಾಂತ್ ಹಾಸನ್, ಪರಮೇಶ್ ದೊಡ್ಡಮಗ್ಗೆ, ದೇವರಾಜ್ ರಾಯಚೂರು, ಜೀವನ್ ರತ್ನ, ವಿನಾಯಕ್ ಬಿದಾರ್ ಹಾಗೂ ನಾಗರಾಜ್ ಭಂಡಾರಿ ಇದ್ದರು.