ಅರಸೀಕೆರೆ ಗ್ರಾಮಾಂತರ: ಶ್ರೀ ಜೇನುಕಲ್ಲು ಸಿದ್ದೇಶ್ವರ ಭಳಗದ ತಂಡದ ಸದಸ್ಯರು ಸೋಮವಾರ ಬೆಳಗಿನ ಜಾವ ಹುಣ್ಣಿಮೆಯ ಪ್ರಯುಕ್ತ ಕಣಕಟ್ಟೆ ಹೋಬಳಿಯ ಹಿರೇಕಲ್ ಬೆಟ್ಟಕ್ಕೆ ತೆರಳಿ ಶ್ರೀ ಹಿರೇಕಲ್ ಬೆಟ್ಟದ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಲೋಕ ಕಲ್ಯಾಣಕ್ಕಾಗಿ ಮಂಗಳವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ತಂಡದ ಸದಸ್ಯರು ಬೆಳಗಿನ ಜಾವ 5.30ಕ್ಕೆ ಅರಸೀಕೆರೆಯ ಎಪಿಎಂಸಿ ಮಾರುಕಟ್ಟೆ ಗೇಟ್ ಬಳಿ ಒಗ್ಗೂಡಿ 6 ಗಂಟೆಗೆ ಪ್ರಯಾಣ ಆರಂಭಿಸಿದರು. ಬಳಿಕ ಸುಮಾರು 30 ನಿಮಿಷಗಳಲ್ಲಿ ಹಿರೇಕಲ್ ಬೆಟ್ಟವನ್ನು ಏರಿ, ಭಕ್ತಿಭಾವದಿಂದ ಶ್ರೀ ಹಿರೇಕಲ್ ಬೆಟ್ಟದ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದರು.
ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯ 48 ದಿನಗಳ ಪಯಣದ ಅಂಗವಾಗಿ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯವು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ, ಪರಸ್ಪರ ಪ್ರೀತಿ, ಏಕತೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶ ಹೊಂದಿದೆ. ವಿವಿಧ ಕ್ಷೇತ್ರಗಳಲ್ಲಿರುವ ಸಮಾನ ಮನಸ್ಕ ಭಕ್ತರು ಒಂದಾಗಿ ದೇವರ ಸ್ಮರಣೆ ಹಾಗೂ ಲೋಕದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಲೋಕ ಕಲ್ಯಾಣ, ನಾಡಿನ ಸಮೃದ್ಧಿ, ರೈತರ ಸುಖ-ಸಮೃದ್ಧಿ, ಸಕಲ ಜೀವಿಗಳ ಒಳಿತಿಗಾಗಿ ಹಾಗೂ ಎಲ್ಲರ ಜೀವನದಲ್ಲಿ ಶಾಂತಿ, ಆರೋಗ್ಯ ಮತ್ತು ನೆಮ್ಮದಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಸ್ವಾಮಿಯ ದರ್ಶನ ಪಡೆದು ಭಕ್ತಿಯ ಪಯಣವನ್ನು ಮುಂದುವರಿಸಿದರು.