ಕರ್ನಾಟಕ ರಾಜ್ಯ ಎಸ್‌ವೈಎಸ್ ವತಿಯಿಂದ ಸಕಲೇಶಪುರ ಪಟ್ಟಣದ ಪುರಭವನದಲ್ಲಿ ಹಿಜಾಮಾ ಚಿಕಿತ್ಸಾ ಆಯೋಜಿಸಲಾಗಿತ್ತು. ಅಬ್ಬು ಮುಸ್ಲಿಯಾರ್, ಶಾಫಿ ನೈಮಿ ಜಮಾಉಲ್ ಲೈಲಿ ತಂಙಳ್, ಸಯ್ಯದ್ ಅಲವಿ, ಯಾದಗರ್ ಇಬ್ರಾಹಿಂ ಇತರರಿದ್ದರು. 
ಹಾಸನ

ಹಿಜಾಮಾ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ

ಮುಸ್ಲಿಂ ಸಮುದಾಯದ ಮುಖಂಡ ಅಬ್ಬು ಮುಸ್ಲಿಯಾರ್ ಹೇಳಿಕೆ

ಸಕಲೇಶಪುರ: ಕರ್ನಾಟಕ ರಾಜ್ಯ ಎಸ್‌ವೈಎಸ್ ವತಿಯಿಂದ ಪಟ್ಟಣದ ಪುರಭವನದಲ್ಲಿ ಹಿಜಾಮಾ ಚಿಕಿತ್ಸಾ (ವೆಟ್ ಕಪ್ಪಿಂಗ್) ಶಿಬಿರವನ್ನು ಬುಧವಾರ ಆಯೋಜಿಸಲಾಗಿತ್ತು.

ಮುಸ್ಲಿಂ ಸಮುದಾಯದ ಮುಖಂಡ ಅಬ್ಬು ಮುಸ್ಲಿಯಾರ್ ಮಾತನಾಡಿ, ರಾಜ್ಯ ಎಸ್‌ವೈಎಸ್ ಸಂಘಟನೆಯು ಹಲವು ವರ್ಷಗಳಿಂದ ಧಾರ್ಮಿಕ ಚಟುವಟಿಕೆ ಜತೆಗೆ ಸಾಮಾಜಿಕ ಸೇವೆ, ಬಡವರಿಗೆ ನೆರವು ಹಾಗೂ ಸಾಂತ್ವನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಶತಮಾನೋತ್ಸವ ಸಂಭ್ರಮದ ಅಂಗವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಭಾಗವಾಗಿ ಸಕಲೇಶಪುರ ಎಸ್‌ವೈಎಸ್ ಘಟಕದ ವತಿಯಿಂದ ಹಿಜಾಮಾ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದರು.

ಹಿಜಾಮಾ ಚಿಕಿತ್ಸಾ ಪದ್ಧತಿ ಹಿಂದಿನಿಂದಲೂ ಆಚರಣೆಯಲ್ಲಿದ್ದು, ಇತ್ತೀಚಿನ ವರ್ಷಗಳಲ್ಲಿ ಮತ್ತೆ ಜನರ ಗಮನ ಸೆಳೆಯುತ್ತಿದೆ. ಈ ಶಿಬಿರದ ಮೂಲಕ ಹೆಚ್ಚಿನ ಜನರಿಗೆ ಚಿಕಿತ್ಸಾ ವಿಧಾನದ ಪರಿಚಯ ಮಾಡಿಸುವುದರ ಜತೆಗೆ ಬಡವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸೇವೆ ತಲುಪಿಸುವುದು ಉದ್ದೇಶವಾಗಿದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಯೋಜನಾ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸೈಯದ್ ಮುಫೀಜ್ ಮಾತನಾಡಿ, ಹಿಜಾಮಾ ಥೆರಪಿ ಇಸ್ಲಾಮಿಕ್ ಪರಂಪರೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ಕಾಲದಿಂದಲೂ ಆಚರಣೆಯಲ್ಲಿರುವ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಾಗಿದೆ. ವೆಟ್ ಕಪ್ಪಿಂಗ್ ಎಂದು ಕರೆಯಲಾಗುವ ಈ ವಿಧಾನದಲ್ಲಿ ವಿಶೇಷ ಕಪ್‌ಗಳ ಮೂಲಕ ಚರ್ಮದ ಮೇಲೆ ಹೀರುವ ಒತ್ತಡ ಉಂಟುಮಾಡಿ, ಸಣ್ಣ ಕಡಿತಗಳ ಮೂಲಕ ಅಲ್ಪ ಪ್ರಮಾಣದ ರಕ್ತವನ್ನು ಹೊರತೆಗೆಯಲಾಗುತ್ತದೆ. ದೇಹದ ನೋವು, ಬೆನ್ನುನೋವು ಹಾಗೂ ಸ್ನಾಯುಗಳ ಬಿಗಿತಕ್ಕೆ ಪರಿಹಾರ ಪಡೆಯುವ ಉದ್ದೇಶದಿಂದ ಕೆಲವರು ಈ ಚಿಕಿತ್ಸೆಯನ್ನು ಅನುಸರಿಸುತ್ತಾರೆ ಎಂದರು.

200ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದರು. ಶಾಫಿ ನೈಮಿ ಜಮಾಉಲ್ ಲೈಲಿ ತಂಙಳ್, ಹಾಸನ ಜಿಲ್ಲಾ ಉಪಖಾಜಿ ಸಯ್ಯದ್ ಅಲವಿ, ಪುರಸಭೆ ಮಾಜಿ ಅಧ್ಯಕ್ಷ ಯಾದಗರ್ ಇಬ್ರಾಹಿಂ, ಆನೆಮಹಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನೆಮಹಲ್ ಹಸೈನಾರ್, ದೇಕ್ಲಾ ಮಸೀದಿ ಅಧ್ಯಕ್ಷ ಸುಲೇಮಾನ್ ಉಪಸ್ಥಿತರಿದ್ದರು.