ಹಾಸನ: ಧಾರ್ಮಿಕ ಜಾಗೃತಿ, ಆಧ್ಯಾತ್ಮಿಕ ಚಿಂತನೆ ಹಾಗೂ ಮಾನಸಿಕ ಸ್ವಾಸ್ಥ್ಯದ ಮಹತ್ವ ಸಾರುವ ಉದ್ದೇಶದಿಂದ ಡಿ.2ರಂದು ಹಾಸನದ ಕಲಾಭವನದಲ್ಲಿ ಜನಜಾಗೃತಿ ಧರ್ಮ ಸಮಾರಂಭ ಆಯೋಜಿಸಲಾಗಿದೆ ಎಂದು ನುಗ್ಗೆಹಳ್ಳಿ ಮಠದ ಪುರವರ್ಗ ಮಠದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಹಾಸನ ನಗರದ ತಣ್ಣೀರುಹಳ್ಳದ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹಾಸನದಲ್ಲಿ ಜನಜಾಗೃತಿ ಧರ್ಮ ಸಮಾರಂಭ ನಡೆಯುತ್ತಿರುವುದು ಖುಷಿಯ ವಿಚಾರ. ಕಾರ್ಯಕ್ರಮ ಬಾಳೆಹೊನ್ನೂರು ಜಗದ್ಗುರು ಶ್ರೀರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
ಅಂದು ಬೆಳಗ್ಗೆ 8.30ಕ್ಕೆ ಹಾಸನದ ಅರಳೆಪೇಟೆಯ ಬಸವೇಶ್ವರ ದೇವಾಲಯದಿಂದ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಗಳನ್ನು ಕಲಾಭವನದವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು. 108 ಕುಂಭ-ಕಳಸಗಳು, ನಾದಸ್ವರ, ನಂದಿಧ್ವಜ ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ. ಬೆಳಗ್ಗೆ 10.30ಕ್ಕೆ ಕಲಾಭವನದ ಮುಂಭಾಗದ ವೇದಿಕೆಯಲ್ಲಿ ಧರ್ಮ ಸಮಾರಂಭ ನಡೆಯಲಿದೆ ಎಂದರು.
ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ಸಿದ್ಧತೆಗಳ ಕುರಿತು ಚರ್ಚಿಸಿ, ಜಿಲ್ಲೆಯ ಎಲ್ಲ ತಾಲೂಕುಗಳ ಭಕ್ತರು, ವಿವಿಧ ಸಮಾಜದ ಮುಖಂಡರು ಹಾಗೂ ಧರ್ಮ ಸಭೆಗೆ ಜಿಲ್ಲೆಯೊಳಗೊಂಡಂತೆ ಅಕ್ಕಪಕ್ಕದ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಚಾರ ನೀಡಬೇಕು ಎಂದು ಮನವಿ ಮಾಡಲಾಯಿತು. ವಿವಿಧ ಮಠಗಳ ಮಠಾಧೀಶರು, ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಕಾರ್ಜುವಳ್ಳಿ ಮಠದ ಶ್ರೀಸದಾಶಿವಾಚಾರ್ಯ ಸ್ವಾಮೀಜಿ, ಯಸಳೂರು ಮಠದ ಶ್ರೀಚನ್ನಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.