ಹಾಸನದ ವಿಮಾನ ನಿಲ್ದಾಣ ಜಿಲ್ಲಾ ಉಸ್ತುವಾರಿ ಸಚಿವ ಕೆಎಂ ಶಿವಲಿಂಗೇಗೌಡ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಗೀತಾ, ಹುಡಾ ಆಯುಕ್ತ ಕೆ ಎಂ ರಮೇಶ್, ಪಿಡಬ್ಲುೃಡಿ ಅಧಿಕಾರಿಗಳು ಸೇರಿದಂತೆ ಹಲವರು ಇದ್ದಾರೆ.  Cabinet approves revised cost of Rs 542.96 crore for Hassan Airport
ಹಾಸನ

ಹಾಸನ ಏರ್‌ಪೋರ್ಟ್ 542.96 ಕೋಟಿ ರೂ. ಪರಿಷ್ಕೃತ ವೆಚ್ಚಕ್ಕೆ ಸಂಪುಟ ಒಪ್ಪಿಗೆ

ಸಚಿವ ಕೆ.ಎಂ.ಶಿವಲಿಂಗೇಗೌಡ ಮಾಹಿತಿ

ಹಾಸನ: ಜಿಲ್ಲೆಯ ಬಹುನಿರೀಕ್ಷಿತ ವಿಮಾನ ನಿಲ್ದಾಣ ಯೋಜನೆಗೆ ರಾಜ್ಯ ಸಚಿವ ಸಂಪುಟ 542.96 ಕೋಟಿ ಪರಿಷ್ಕೃತ ವೆಚ್ಚಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ವೆಚ್ಚವನ್ನು 193.65 ಕೋಟಿಯಿಂದ 542.96 ಕೋಟಿಗೆ ಪರಿಷ್ಕರಿಸಲು ನಿರ್ಧರಿಸಲಾಯಿತು. ಯೋಜನೆಗೆ ಅಗತ್ಯವಿರುವ ಹೆಚ್ಚುವರಿ 349.31 ಕೋಟಿ ರೂ. ಅನುದಾನ ಹಾಗೂ ಹೆಚ್ಚುವರಿ ಜಮೀನು ಸ್ವಾಧೀನಕ್ಕೂ ಸಂಪುಟ ಒಪ್ಪಿಗೆ ನೀಡಿದೆ. ಹೆಚ್ಚುವರಿ ಅನುದಾನದಲ್ಲಿ 122 ಕೋಟಿಯನ್ನು ಹೆಚ್ಚುವರಿ ಭೂಸ್ವಾಧೀನಕ್ಕೆ ಮತ್ತು 227.31 ಕೋಟಿಯನ್ನು ಹೆಚ್ಚುವರಿ ಕಾಮಗಾರಿಗಳು ಹಾಗೂ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅಗತ್ಯವಿರುವ ಸೌಲಭ್ಯಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.

ಕೆ.ಎಂ.ಶಿವಲಿಂಗೇಗೌಡ ಅವರು ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ವಿಮಾನ ನಿಲ್ದಾಣ ಯೋಜನೆಗೆ ಚುರುಕು ನೀಡಿದ್ದರು. ಕಾಮಗಾರಿಯ ಪ್ರಗತಿಗೆ ಅಡ್ಡಿಯಾಗಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹಲವು ಸಭೆಗಳನ್ನು ನಡೆಸಿದ್ದರು. ಎರಡು ವರ್ಷಗಳೊಳಗೆ ಹಾಸನದಿಂದ ವಿಮಾನ ಸೇವೆ ಆರಂಭಿಸುವ ಗುರಿ ಹೊಂದಿದ್ದ ಅವರು, ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡುವುದಾಗಿ ಹೇಳಿದ್ದರು. ಇದೀಗ ಭೂಸ್ವಾಧೀನ ಮತ್ತು ಹೆಚ್ಚುವರಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಲು ಸಂಪುಟದ ಒಪ್ಪಿಗೆ ದೊರೆತಿರುವುದು ಅವರ ಪ್ರಯತ್ನಕ್ಕೆ ಫಲ ನೀಡಿದೆ.

ವಿಮಾನ ನಿಲ್ದಾಣ ಕಾರ್ಯಾರಂಭಿಸಿದ ಬಳಿಕ ಹಾಸನದ ಸಂಪರ್ಕ ವ್ಯವಸ್ಥೆ ವಿಸ್ತರಿಸಲಿದ್ದು, ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಇಷ್ಟು ವರ್ಷ ಕಾದಿದ್ದ ಹಾಸನದ ಜನತೆಗೆ, ತಮ್ಮ ಜಿಲ್ಲೆಯಿಂದಲೇ ವಿಮಾನ ಹಾರಾಟ ಆರಂಭವಾಗುವ ದಿನಗಳು ಈಗ ಇನ್ನಷ್ಟು ಹತ್ತಿರವಾಗಿವೆ.