ಅರಕಲಗೂಡು ತಾಲೂಕು ಸಂತೆಮರೂರು ಗ್ರಾಮದಲ್ಲಿ ಕೃಷಿ ಸಂಬಂಧಿತ ಕ್ಷೇತ್ರ ಸಂರಕ್ಷಣಾ ಅಭಿಯಾನ ನಡೆಸಲಾಯಿತು. ಎ.ಎಸ್. ಪ್ರವೀಣ್, ಸಲ್ಮಾನ್, ಶಾಲಿನಿ, ರೈತರಿದ್ದರು. 
ಹಾಸನ

ಸುಸ್ಥಿರ ಕೃಷಿ ಪದ್ಧತಿ ಲಾಭದಾಯಕ

ಸಸ್ಯ ಸಂರಕ್ಷಣಾಧಿಕಾರಿ ಎ.ಎಸ್.ಪ್ರವೀಣ್ ಹೇಳಿಕೆ

ಅರಕಲಗೂಡು: ಸಮಗ್ರ ಬೆಳೆ ಸಂರಕ್ಷಣೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಷೇತ್ರ ಸಂರಕ್ಷಣಾ ಅಭಿಯಾನದ ಮೂಲಕ ಮಾಹಿತಿ ನೀಡಲಾಗಿದೆ ಎಂದು ಬೆಂಗಳೂರಿನ ಪ್ರಾದೇಶಿಕ ಕೇಂದ್ರೀಯ ಸಮಗ್ರ ಸಸ್ಯ ಪೀಡೆ ನಿರ್ವಹಣಾ ಕೇಂದ್ರದ ಸಹಾಯಕ ಸಸ್ಯ ಸಂರಕ್ಷಣಾಧಿಕಾರಿ ಎ.ಎಸ್.ಪ್ರವೀಣ್ ತಿಳಿಸಿದರು.

ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಭಿಯಾನದಲ್ಲಿ ಮಾತನಾಡಿ, ಸುಸ್ಥಿರ ಕೃಷಿ ಪದ್ಧತಿ ಲಾಭದಾಯಕ. ಅಭಿಯಾನದ ಮೂಲಕ ರೈತರಿಗೆ ಬೆಳೆ ಸಂರಕ್ಷಣೆ ಹಾಗೂ ಮಾರ್ಗದರ್ಶನ ನೀಡಲಾಗಿದೆ ಎಂದರು.

ಕೃಷಿ ಅಧಿಕಾರಿ ಸಲ್ಮಾನ್ ಮಾತನಾಡಿ, ರೈತರ ಅನುಕೂಲಕ್ಕಾಗಿ ವಿವಿಧ ಚಟುವಟಿಕೆಗಳ ಕುರಿತು ಅಭಿಯಾನ ನಡೆಸಲಾಗುತ್ತಿದೆ. ಬೆಳೆಗಳಿಗೆ ತಗಲುವ ಕೀಟ ಹಾಗೂ ರೋಗಗಳ ನಿರ್ವಹಣೆ, ಸಮಗ್ರ ಸಸ್ಯ ಪೀಡೆ ನಿರ್ವಹಣಾ ಪದ್ಧತಿಗಳ ಅಳವಡಿಕೆ ಮತ್ತು ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳ ಬಳಕೆ ಮಹತ್ವದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ಸಹಾಯಕ ತಂತ್ರಜ್ಞಾನ ವ್ಯವಸ್ಥಾಪಕಿ ಶಾಲಿನಿ, ಕೃಷಿ ತಂತ್ರಜ್ಞಾನಗಳ ಬಳಕೆ ಹಾಗೂ ರೈತರಿಗೆ ದೊರೆಯುವ ಮಾರ್ಗದರ್ಶನ ಕುರಿತು ಮಾಹಿತಿ ನೀಡಿದರು.

ಶಾಂತ ಪ್ರಸಾದ್ ಅರಸ್, ಸತೀಶ್ ಅರಸ್, ನಾಗೇಂದ್ರ ಪ್ರಸಾದ್, ಸುರೇಶ್ ಅರಸ್, ವಿಶ್ವನಾಥ್, ದಿನೇಶ್, ಶಶಿ, ಧರ್ಮ ಸೇರಿದಂತೆ 40ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.