ಆಲೂರು: ಆಲೂರು ತಾಲೂಕು ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸೃಜನಶೀಲ ಸಾಹಿತಿ, ಶಿಕ್ಷಕಿ ಆಕಾಶವಾಣಿ ಉದ್ಘೋಷಕಿ ಡಿ.ಸುಜಲಾದೇವಿ ಕುಂದೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಎಸ್.ವಿ.ಕೃಷ್ಣೇಗೌಡ ಮಣಿಪುರ ತಿಳಿಸಿದ್ದಾರೆ.
ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ ಅವರ ಸಲಹೆ ಮೇರೆಗೆ ತಾಲೂಕು ಗೌರವಾಧ್ಯಕ್ಷ ಎಂ.ಬಾಲಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ. ಈ.ಜಯರಾಜ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಉಪಾಧ್ಯಕ್ಷ ಟಿ.ಕೆ.ನಾಗರಾಜ್, ಕಾರ್ಯದರ್ಶಿ ಧರ್ಮ ಕೆರಲೂರು, ಸಂಘಟನಾ ಕಾರ್ಯದರ್ಶಿ ಡಿ.ಸಿ.ಬಸವರಾಜ್, ಮಹಿಳಾ ಕಾರ್ಯದರ್ಶಿ ಚಂದ್ರಕಲಾ ಎಂ. ಮುಂತಾದವರನ್ನೊಳಗೊಂಡ ಸಮಿತಿ ಡಿ.ಸುಜಲಾದೇವಿಯವರ ಸಾಹಿತ್ಯಿಕ ಹಾಗೂ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಆಲೂರು ತಾಲೂಕು ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಎಸ್.ವಿ.ಕೃಷ್ಣೇಗೌಡ ಮಣಿಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನಾಧ್ಯಕ್ಷರ ಪರಿಚಯ:
ಡಿ.ಸುಜಲಾದೇವಿ ಅವರು 1975 ಸೆ.19ರಂದು ಹಾಸನ ಜಿಲ್ಲೆ ಆಲೂರು ತಾಲೂಕು ಕುಂದೂರಿನಲ್ಲಿ ಜನಿಸಿದರು. ತಂದೆ ಧರಣೇಂದ್ರರಾಜ್, ತಾಯಿ ಆರ್.ಜಯಪದ್ಮ.
ಇವರು ಎಂ.ಎ.ಕನ್ನಡ ಪದವಿ, ಪತ್ರಿಕೋದ್ಯಮದಲ್ಲಿ ಪದಿದದವಿ, ಸ್ನಾತಕೋತ್ತರ ಹಾಗೂ ಡಿಪ್ಲೋಮಾ, ಹಿಂದಿ ಬಿ.ಎಡಿ ಪಡೆದಿದ್ದಾರೆ.
2010ರಿಂದ 2026ರ ಈವರೆಗೆ ಸುಪ್ರಜ ಗುರುಕುಲ ಆಂಗ್ಲಮಾಧ್ಯಮ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ನೃತ್ಯ, ಸಾಹಿತ್ಯ, ಸಂಗೀತ, ನಾಟಕ ಎಲ್ಲ ರಂಗಗಳಲ್ಲೂ ಆಸಕ್ತಿ ಹೊಂದಿದ್ದು, ಶಿಕ್ಷಕಿಯಾಗಿ ಆಲೂರು ತಾಲೂಕಿನ ವಿವಿಧ ಶಾಲೆಗಳಲ್ಲಿ 6 ವರ್ಷಗಳಿಗೂ ಅಧಿಕ ಸೇವೆ. ನಂತರ ಹಾಸನದಲ್ಲಿ 3 ವರ್ಷಗಳ ಸೇವೆ. ನಂತರ ಕಳೆದ ಹದಿನೇಳು ವರ್ಷಗಳಿಂದ ಹಾಸನ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ, ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆಲೂರು ತಾಲೂಕು ಹರಿಹಳ್ಳಿಯಲ್ಲಿ ಮಂಗಳ ಕಲಾಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆಯಾಗಿ, ಕಾರ್ಯದರ್ಶಿಯಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿರುವುದರ ಜತೆಗೆ ಶ್ರೀಮಾತಾ ಹಾಗೂ ಸಾಹಿತ್ಯಶ್ರೀ ಎಂಬ ಎರಡು ಕೃತಿಗಳ ಸಂಪಾದಕಿಯಾಗಿ ಹಾಗೂ ಮೈಸೂರಿನ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಕೊಡಗಿನಲ್ಲಿ ರಚಿತವಾದ ‘ಜೇನುನುಡಿ ಕಲಿಯಾಕು’ಎಂಬ ಸಾಕ್ಷರತಾ ಪಠ್ಯಪುಸ್ತಕದ ಲೇಖಕಿಯಾಗಿ ದುಡಿದಿದ್ದಾರೆ. 2025ರಲ್ಲಿ ಹಾಸನದ ಮಾಣಿಕ್ಯ ಪ್ರಕಾಶನವು ರಾಜ್ಯಮಟ್ಟದ ಜನ್ನ ಕಾವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ಹಾಸನ ಜಿಲ್ಲಾಡಳಿತವು 70ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಾಹಿತ್ಯ ಸೇವೆಯನ್ನು ಗುರುತಿಸಿ ಗೌರವಿಸಿದೆ. ಕೊಡಗು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು 2026ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.