ಬೇಲೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಹಾಲು ಹಾಗೂ ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ರಾಜ್ಯ ಸರ್ಕಾರ ಬಡ ಜನರ ಮೇಲೆ ಬರೆ ಹಾಕುತ್ತಿರುವುದನ್ನು ಖಂಡನೀಯ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ದರ ಹೆಚ್ಚಳ ಮಾಡಿದೆ. ಚುನಾವಣೆಯಲ್ಲಿ ಜನರಿಗೆ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿ ಆಡಳಿತಕ್ಕೆ ಬಂದ ತಕ್ಷಣವೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿತು. ಇದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಬೊಕ್ಕಸಕ್ಕೆ ಹೊಡೆತ ಬೀಳುತ್ತಿರುವುದನ್ನು ತಪ್ಪಿಸಲು ಈಗ ಮತ್ತೊಮ್ಮೆ ಹಾಲು ಹಾಗೂ ಬಸ್ ದರ ಬೆಲೆ ಏರಿಕೆ ಮಾಡಿರುವುದು ಮತ್ತೊಮ್ಮೆ ಜನ ಸಾಮಾನ್ಯರ ಮೇಲೆ ಹೊರೆಯಾಗುತ್ತಿದೆ. ಸರ್ಕಾರ ಬೆಲೆ ಏರಿಕೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್ ಮಾತನಾಡಿ, ಗ್ಯಾರಂಟಿ ಯೋಜನೆಗೆ ಕೊಡುವ ಹಣಕ್ಕಾಗಿ ಒಂದು ಕಡೆ ಕೊಟ್ಟ ಹಾಗೆ ಮಾಡಿ ಮತ್ತೊಂದೆಡೆ ಹಣ ಲೂಟಿ ಹೊಡೆಯಲು ಸರ್ಕಾರ ಮುಂದಾಗಿದೆ. ಇದರಿಂದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಮೇಲೆಯೇ ಹೊರೆ ಬೀಳುತ್ತಿದೆ ಎಂದರು.
ಜಯ ಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಸತೀಶ್, ಆಟೋ ಘಟಕದ ಅಧ್ಯಕ್ಷ ಲಕ್ಷ್ಮಣ್, ಮುಖಂಡರಾದ ವಿನಯ್, ವೆಂಕಟೇಶ್, ಕುಮಾರ್, ಕೃಷಮೂರ್ತಿ, ಸುರೇಶ್, ನಾಗರಾಜು, ವಿರೂಪಾಕ್ಷ, ಗಂಗಾಧರ್, ಮಧು, ರಾಮು ಇತರರಿದ್ದರು.