ಶ್ರವಣಬೆಳಗೊಳ: ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಬದಲು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಬಸವಣ್ಣ, ಕನಕದಾಸ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಗಾಂಧೀಜಿ ಅವರು ಸಮಸಮಾಜ ನಿರ್ಮಾಣದ ಕನಸು ಕಂಡಿದ್ದರು. ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹೋಬಳಿಯ ಕಬ್ಬಾಳು ಗ್ರಾಮದಲ್ಲಿ ಶನಿವಾರ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ನಿರ್ಮಿಸಿರುವುದು ಸಂತಸದ ಸಂಗತಿ. ಇಂತಹ ಮಹನೀಯರ ಜೀವನ, ಸಾಧನೆಗಳು ಯುವಜನರಲ್ಲಿ ಸ್ಫೂರ್ತಿ ಮತ್ತು ದೇಶಭಕ್ತಿಯನ್ನು ಮೂಡಿಸುತ್ತವೆ ಎಂದರು.
ವಿಜಯನಗರ ಅರಸರ ಕಾಲದಲ್ಲಿ ಪಾಳೇಗಾರರ ಕುಟುಂಬದಲ್ಲಿ ಜನಿಸಿದ ಕನಕದಾಸರು, ಆರಂಭದಲ್ಲಿ ತಿಮ್ಮಪ್ಪನಾಯಕರೆಂದು ಗುರುತಿಸಿಕೊಂಡಿದ್ದರು. ಯುದ್ಧದಲ್ಲಿ ಉಂಟಾದ ಅನುಭವಗಳಿಂದ ವೈರಾಗ್ಯದ ಹಾದಿ ಹಿಡಿದು ಕನಕದಾಸರಾದರು. ಅವರು ಕೇವಲ ದಾಸರಷ್ಟೇ ಅಲ್ಲದೇ ಮಹಾನ್ ಸಾಹಿತಿಯೂ ಆಗಿದ್ದರು. ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಹಾಗೂ ರಾಮಧಾನ್ಯ ಚರಿತೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಪರಿವರ್ತನೆಗಾಗಿ ಶ್ರಮಿಸಿದಂತೆ ಕನಕದಾಸರೂ ಸಮಸಮಜದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಜಾತಿ ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಪೋಷಿಸಿಕೊಂಡು ಬಂದಿವೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಾದರೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ಎಲ್ಲರಿಗೂ ದೊರೆಯಬೇಕು. ಅಸಮಾನತೆ ಇರುವವರೆಗೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.
ಸಂವಿಧಾನ ಜಾರಿಗೆ ಬಂದು 76 ವರ್ಷಗಳಾದರೂ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ಮುಂದುವರಿದಿವೆ. ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರಲಿಲ್ಲ, ಸಮಾನತೆಯಿಂದ ವಂಚಿತರಾದ ಎಲ್ಲ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕರು. ಎಲ್ಲ ಸಂತರು ಮತ್ತು ಸಮಾಜ ಸುಧಾರಕರು ಸಮಾನತೆಯ ಸಂದೇಶವನ್ನೇ ಸಾರಿದ್ದಾರೆ. ಸರ್ಕಾರ ನಡೆಸುವವರು ಅಸಮಾನತೆ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಎಂಟು ವರ್ಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಾನು, ಬಡವರು, ಮಹಿಳೆಯರು, ಕಾರ್ಮಿಕರು, ದೀನ-ದಲಿತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಭಾಗ್ಯ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಮೂಲಕ ದುರ್ಬಲ ವರ್ಗಗಳಿಗೆ ನೆರವು ನೀಡುವ ಪ್ರಯತ್ನ ಮಾಡಿದ್ದೇನೆ. ಆದರೂ ಸಮಸಮಾಜದ ನಿರ್ಮಾಣದ ಗುರಿ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ ಎಂದು ತಿಳಿಸಿದರು.
ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಹಾಗೂ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಕನಕದಾಸರ 500ನೇ ಜಯಂತಿಯನ್ನು ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸುವ ಅವಕಾಶ ದೊರೆತದ್ದು ಪುಣ್ಯ. ಮಹನೀಯರ ತ್ಯಾಗ, ಆದರ್ಶಗಳನ್ನು ಯುವಜನರು ಅಳವಡಿಸಿಕೊಂಡು ದೇಶದ ಪರಿವರ್ತನೆಗೆ ಶ್ರಮಿಸಬೇಕು ಎಂದರು.
ಈ ಭಾಗದ ಏತ ನೀರಾವರಿ ಯೋಜನೆಗೆ 375 ಕೋಟಿ ರೂ.ಅನುದಾನ ನೀಡಿದ್ದು, ಕಬ್ಬಾಳು ಗ್ರಾಮದಲ್ಲಿ ನೂತನ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದ್ದು, ದಲಿತರು, ಹಿಂದುಳಿದವರು, ರೈತರು, ಮಹಿಳೆಯರು ಹಾಗೂ ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ. ನಾನು ಕಾಂಗ್ರೆಸ್ನಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಗುರುಗಳು. ಜೆಡಿಎಸ್ನಲ್ಲಿದ್ದ ಕಾಲದಿಂದಲೂ ಅವರೊಂದಿಗೆ ರಾಜಕೀಯ ಒಡನಾಟವಿದ್ದು, ತಮ್ಮನ್ನು ರಾಜಕೀಯವಾಗಿ ಬೆಳೆಸಿ, ಸಹಕಾರ ನೀಡಿ ಸಚಿವ ಸ್ಥಾನದವರೆಗೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸಿದ್ದರಾಮಯ್ಯ ಅವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕರಲ್ಲಿ ಪ್ರಮುಖರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಾಖಲೆಯನ್ನು ಮೀರಿ ತಮ್ಮದೇ ಛಾಪು ಮೂಡಿಸಿದ್ದಾರೆ. 17 ಬಾರಿ ಬಜೆಟ್ ಮಂಡಿಸಿರುವುದು ಅವರ ಆಡಳಿತ ಅನುಭವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಬಡವರ ಪರ ಚಿಂತನೆ ಹೊಂದಿರುವ ಸಿದ್ದರಾಮಯ್ಯ ಅವರು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ್ದಾರೆ. ರಾಜಕೀಯದಲ್ಲಿ ನೀಡಿದ ಮಾತಿಗೆ ಬದ್ಧರಾಗಿರುವ ಅವರು, ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿಚಾರದಲ್ಲಿಯೂ ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಮುಂದೆಯೂ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಗಿನೆಲೆ ಕನಕ ಪೀಠದ ಶ್ರೀಶಿವಾನಂದಪುರಿ ಸ್ವಾಮೀಜಿ, ಸಂಸದ ಶ್ರೇಯಸ್ ಪಟೇಲ್, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕನಕ ಯುವಸೇನೆ ಅಧ್ಯಕ್ಷ ಕೆ.ಎನ್.ದೊಡ್ಡೇಗೌಡ, ತಾಪಂ ಮಾಜಿ ಸದಸ್ಯ ಡಿ.ಕೆ.ರಾಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕಬ್ಬಾಳು ಸುರೇಶ್, ಅಣತಿ ಆನಂದ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ, ಎಂ.ಕೆ.ಮಂಜೇಗೌಡ, ತಿಮ್ಮೇಗೌಡ ಹಾಗೂ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.