ಬೇಲೂರು: ಪಟ್ಟಣದ ಹೊರವಲಯದಲ್ಲಿರುವ ಮಲ್ಲಾಪುರ ಸಮೀಪದ ಕೈಗಾರಿಕಾ ತರಬೇತಿ ಸಂಸ್ಥೆಗೆ (ಐಟಿಐ) ಶಾಸಕ ಎಚ್.ಕೆ.ಸುರೇಶ್ ಬುಧವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಹಾಗೂ ಪರಿಸರದ ಮಾಹಿತಿ ಪಡೆದು ಪರಿಶೀಲಿಸಿದ್ದಲ್ಲದೆ, ಅಲ್ಲಿನ ಉಪನ್ಯಾಸಕರು ಹಾಗೂ ಸಿಬ್ಬಂದಿಯನ್ನು ತರಾಟೆ ತೆಗೆದು ಕೊಂಡರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಇಲ್ಲಿನ ಕಾಲೇಜಿನಲ್ಲಿ ಪಾಠ ಪ್ರವಚನ ಹಾಗೂ ಪ್ರಾಕ್ಟಿಕಲ್ ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಪ್ರಾಂಶುಪಾಲರು ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಉಡಾಫೆಯಿಂದ ವರ್ತಿಸುತ್ತಾರೆ ಮತ್ತು ಇಲ್ಲಿ ತುಂಬ ಅವ್ಯವಸ್ಥೆ ಇದೆ ಎಂಬ ದೂರುಗಳು ಹಲವು ದಿನಗಳಿಂದ ಕೇಳಿ ಬರುತ್ತಿದ್ದವು. ಅನಿವಾರ್ಯ ಕೆಲಸದ ಒತ್ತಡದಿಂದ ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಆದರೂ ಬಿಡುವು ಮಾಡಿಕೊಂಡು ಭೇಟಿ ನೀಡಿದಾಗ ಸಾರ್ವಜನಿಕರ ದೂರಿನಲ್ಲಿನ ಅಂಶಗಳು ಅಕ್ಷರಶಃ ಸತ್ಯವೆಂಬುದು ಬೆಳಕಿಗೆ ಬಂದಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಈ ಸಂಸ್ಥೆಯಲ್ಲಿ ಶೇ. 60ರಿಂದ 70 ಸಿಬ್ಬಂದಿ ಕೊರತೆಯಿದೆ. ಪ್ರಾಂಶುಪಾಲರೇ ಪತ್ತೆಯಿಲ್ಲ. ಇಲ್ಲಿನ ಆವರಣ ಗಮನಿಸಿದರೆ ಇದೊಂದು ಪಾಳುಬಿದ್ದ ವಾತಾವರಣದಂತಿದೆ. ಇಂತಹ ಸ್ಥಿತಿಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಇಲ್ಲಿಗೆ ಹೇಗೆ ಕಳುಹಿಸುತ್ತಾರೆ. ಇಂತಹ ದುಸ್ಥಿತಿ ನಿರ್ಮಾಣವಾಗಿರುವಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ತಾಂತ್ರಿಕ ತರಬೇತಿ ನೀಡಲು ಹೇಗೆ ಸಾಧ್ಯ. ಇಲ್ಲಿನ ಸಿಬ್ಬಂದಿ ಸರ್ಕಾರದ ಸಂಬಳ ಹಾಗೂ ಅನುದಾನವನ್ನು ವ್ಯರ್ಥ ಮಾಡುತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಕೂಡಲೇ ಸಂಸ್ಥೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ಇದ್ದರು.