ಚನ್ನರಾಯಪಟ್ಟಣದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಸೆಸ್ಕ್ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು. ಆರ್.ರತ್ನಾ, ಹರೀಶ್, ಕೃಷ್ಣ, ವಜ್ರಕುಮಾರ್ ಇತರರಿದ್ದರು. 
ಹಾಸನ

ಸಂಜೆ 6ರಿಂದ ರಾತ್ರಿ 10ರವರೆಗೆ ತ್ರೀೇಸ್ ವಿದ್ಯುತ್ ಪೂರೈಸಿ

ಸೆಸ್ಕ್ ಅಧಿಕಾರಿಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಸೂಚನೆ

ಚನ್ನರಾಯಪಟ್ಟಣ: ರೈತರ ಹಿತದೃಷ್ಟಿಯಿಂದ ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ತ್ರೀೇಸ್ ವಿದ್ಯುತ್ ಪೂರೈಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಇಂಜಿನಿಯರ್‌ಗಳು ಹಾಗೂ ಎಸ್‌ಒಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನ ಶೇ.80ಕ್ಕೂ ಹೆಚ್ಚು ರೈತರು ತೋಟದ ಮನೆಗಳಲ್ಲಿ ವಾಸಿಸುತ್ತಿದ್ದು, ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆ, ವಿದ್ಯಾರ್ಥಿಗಳ ವ್ಯಾಸಂಗ ಸೇರಿದಂತೆ ಹಲವು ದೈನಂದಿನ ಚಟುವಟಿಕೆಗಳಿಗೆ ವಿದ್ಯುತ್ ಅತ್ಯಗತ್ಯವಾಗಿದೆ. ತಿಂಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ತೋಟದ ಮನೆಗಳಲ್ಲಿ ವಾಸಿಸುವವರು ಚಿರತೆಗಳ ಹಾವಳಿಯಿಂದ ರಾತ್ರಿ ವೇಳೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಸಮಯವಾದ್ದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ತೊಂದರೆಯಾಗಿದ್ದು, ವಿದ್ಯುತ್ ಇಲ್ಲದಿರುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸಮಸ್ಯೆ ನಿವಾರಿಸಬೇಕು ಎಂದರು.

ತ್ವರಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಪೂರ್ಣಗೊಂಡಿದ್ದರೂ ಒಂದು ವರ್ಷದಿಂದ ವಿದ್ಯುತ್ ಪರಿವರ್ತಕಗಳನ್ನು ಒದಗಿಸದೆ ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ರೈತರು ಸಮಸ್ಯೆಗಳ ಕುರಿತು ಎಸ್‌ಒಗಳಿಗೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸದೆ ಉಡಾಫೆ ತೋರುತ್ತಿರುವುದು ಸರಿಯಲ್ಲ ಎಂದು ಬೇಸರಿಸಿದರು.

ಪರಿವರ್ತಕ ಅಳವಡಿಕೆ: 220 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಸುಟ್ಟುಹೋಗಿರುವ 100 ಎಂ.ಪಿ.ಎ. ಸಾಮರ್ಥ್ಯದ ವಿದ್ಯುತ್ ಪರಿವರ್ತಕವನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ತಾಲೂಕಿನಲ್ಲಿ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ 61 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದ್ದು, ಇನ್ನೂ 35 ಪರಿವರ್ತಕಗಳನ್ನು ಒಂದು ವಾರದೊಳಗೆ ಅಳವಡಿಸಬೇಕು. ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಅಗತ್ಯವಿರುವ ವಿದ್ಯುತ್ ಪರಿವರ್ತಕಗಳನ್ನು ಶೀಘ್ರ ಅಳವಡಿಸಿ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿದರು.

ಪರಿವರ್ತಕಗಳ ಸುರಕ್ಷತೆಗೆ ಆದ್ಯತೆ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳ ಸಂರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪರಿವರ್ತಕಗಳ ಸುತ್ತಮುತ್ತಲಿನ ಪ್ರದೇಶಗಳನ್ನು ನಿಯಮಿತವಾಗಿ ಪರಿಶೀಲಿಸಿ, ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಆರ್.ರತ್ನಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಹರೀಶ್, ಕೃಷ್ಣ, ವಜ್ರಕುಮಾರ್ ಇತರರಿದ್ದರು.