ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಧವಲತೀರ್ಥಂನಲ್ಲಿ ಬಾಹುಬಲಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳ ನೂತನ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಲಾಯಿತು. ಸಹಕಾರ ಸಚಿವ ಲಕ್ಷ್ಮಣ ಸವದಿ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಸಿ.ಎನ್.ಬಾಲಕೃಷ್ಣ, ಎಂ.ಎ.ಗೋಪಾಲಸ್ವಾಮಿ, ಶ್ರೀಕಾಂತ್ ಪುಲಾರೆ ಇದ್ದರು. 
ಹಾಸನ

ಶೈಕ್ಷಣಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅನನ್ಯ

ಸಹಕಾರ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯ

ಶ್ರವಣಬೆಳಗೊಳ: ಹೊಸ ತಲೆಮಾರಿನ ಭವಿಷ್ಯ ಹಾಗೂ ಸಮಾಜದ ಒಳಿತಿಗಾಗಿ ಮಠಗಳು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿವೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಧವಲತೀರ್ಥಂನಲ್ಲಿ ಬಾಹುಬಲಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳ ನೂತನ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಎಐ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಇಂದಿನ ಕಾಲದಲ್ಲೂ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಕ್ಷೇತ್ರಗಳಲ್ಲಿ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳಿವೆ. ಆರೋಗ್ಯ ಸೇವೆಯಲ್ಲಿ ನರ್ಸಿಂಗ್ ವೃತ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಶ್ರವಣಬೆಳಗೊಳದ ಸ್ವಾಮೀಜಿಯವರು ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಗಳ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವುದರ ಜತೆಗೆ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರದ ಮೇಲಿನ ಜವಾಬ್ದಾರಿಯೂ ಒಂದಷ್ಟು ಕಡಿಮೆಯಾಗಲಿದೆ. ಈ ಮೂಲಕ ಮಠವು ಸರ್ಕಾರದ ಸೇವಾ ಕಾರ್ಯಕ್ಕೂ ಸಹಕಾರ ನೀಡಿದಂತಾಗಿದೆ ಎಂದು ಹೇಳಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಮಠದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ನೀಡುವ ಕೇಂದ್ರಗಳಲ್ಲ. ಸಮಾಜಕ್ಕೆ ಸೇವೆ ಸಲ್ಲಿಸುವ ಸಮರ್ಥ ವ್ಯಕ್ತಿಗಳನ್ನು ರೂಪಿಸುವ ಕೇಂದ್ರಗಳಾಗಬೇಕು. ನೂತನ ಕಟ್ಟಡದ ಶಿಲಾನ್ಯಾಸವು ಕೇವಲ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕುವುದಲ್ಲ, ಭವಿಷ್ಯದ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದಂತಾಗಿದೆ ಎಂದರು.

ನರ್ಸಿಂಗ್ ಶಿಕ್ಷಣ ವ್ಯವಸ್ಥೆ ಅತ್ಯಂತ ಮಹತ್ವದ್ದಾಗಿದೆ. ರೋಗಿಗಳನ್ನು ಕರುಣೆ, ವಾತ್ಸಲ್ಯ ಮತ್ತು ಆತ್ಮೀಯತೆಯಿಂದ ಆರೈಕೆ ಮಾಡುವವರು ನರ್ಸ್‌ಗಳು. ಕರುಣೆ, ಮಾತೃತ್ವದ ಗುಣ ಹಾಗೂ ಸೇವಾ ಮನೋಭಾವ ನರ್ಸಿಂಗ್ ವೃತ್ತಿಯ ಪ್ರಮುಖ ಅಂಶಗಳಾಗಿವೆ. ಪರಸ್ಪರ ಮೈತ್ರಿ ಭಾವನೆಯಿಂದ ಬದುಕುವುದೇ ಜೀವನದ ಸಾರ್ಥಕತೆ. ನರ್ಸ್‌ಗಳು ಕರುಣೆಯ ಪ್ರತಿನಿಧಿಗಳಾಗಿ, ಮಾನವ ಕುಲದ ಸೇವಕರಾಗಿ ಕಾರ್ಯನಿರ್ವಹಿಸುತ್ತಾರೆ. ರೋಗಿಗಳ ಆರೈಕೆ ಮತ್ತು ಆರೋಗ್ಯ ಸೇವೆಯಲ್ಲಿ ಅವರ ಪಾತ್ರ ಅನನ್ಯವಾಗಿದೆ ಎಂದು ನುಡಿದರು.

ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ ಕುಲಸಚಿವ ಶ್ರೀಕಾಂತ್ ಪುಲಾರೆ, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ ಪರೀಕ್ಷಾ ಮಂಡಳಿ ಪರೀಕ್ಷಾ ಮೇಲ್ವಿಚಾರಕ ಎಂ.ಎಸ್.ಶರತ್ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಯುವರಾಜ್, ಎ.ಸಿ.ಪಾಟೀಲ್ ಉಪಸ್ಥಿತರಿದ್ದರು.