ಚನ್ನರಾಯಪಟ್ಟಣ: ಪ್ರಜಾಸೇವಾ ಆಂದೋಲನದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರ ವಿಶ್ವಾಸಗಳಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಆಂದೋಲನ ಕೇವಲ ಅರ್ಜಿ ಸ್ವೀಕರಿಸುವ ವೇದಿಕೆಯಾಗದೆ, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸುವ ವೇದಿಕೆಯಾಗಬೇಕು ಎಂದರು.
ಸ್ವೀಕರಿಸಿದ ಪ್ರತಿಯೊಂದು ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗದಂತೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಂಡು, ಅದರ ಮಾಹಿತಿಯನ್ನು ಅರ್ಜಿದಾರರಿಗೆ ನೀಡಬೇಕು ಎಂದರು.
ತಾಲೂಕು ಮಟ್ಟದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಬಗೆಹರಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೋಬಳಿ ಮಟ್ಟದಲ್ಲೂ ಸಭೆ: ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಆಲಿಸಿ ಪರಿಹರಿಸುವ ಉದ್ದೇಶದಿಂದ ಅ.24ರಂದು ಶ್ರವಣಬೆಳಗೊಳದಲ್ಲಿ ಪ್ರಜಾಸೇವಾ ಸಭೆ ಆಯೋಜಿಸಲಾಗುವುದು. ನಂತರ ಬಾಗೂರು ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಭೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಸಭೆಗೆ ಹಾಜರಾಗಿ ಅಹವಾಲುಗಳನ್ನು ಸಲ್ಲಿಸಬೇಕು ಎಂದು ಮನವಿ ಮಾಡಿದರು.
ನಕಲಿ ಔಷಧ ಮಾರಾಟಕ್ಕೆ ಕಡಿವಾಣ: ತಾಲೂಕಿನಲ್ಲಿ ನಕಲಿ ಹಾಗೂ ನಿಯಮಬಾಹಿರ ಔಷಧಗಳ ಮಾರಾಟ ನಡೆಯದಂತೆ ಔಷಧ ಅಂಗಡಿಗಳ ಮೇಲೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಅಕ್ರಮ ಪತ್ತೆಯಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಎಸ್‌ಐಆರ್ ಪ್ರಕ್ರಿಯೆ ಸುಗಮ: ತಾಲೂಕಿನಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ. ಸಣ್ಣಪುಟ್ಟ ಸಮಸ್ಯೆಗಳನ್ನು ತಹಸೀಲ್ದಾರ್ ನೇತೃತ್ವದಲ್ಲಿ ಪರಿಹರಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಅಥವಾ ತಿದ್ದುಪಡಿ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಸಭೆಯಲ್ಲಿ ಕಂದಾಯ ಇಲಾಖೆಯ 20, ಸರ್ವೇ ಇಲಾಖೆಯ 17, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 12, ಆರೋಗ್ಯ ಇಲಾಖೆಯ 1 ಹಾಗೂ ಪುರಸಭೆಯ 4 ಅರ್ಜಿಗಳು ಸೇರಿದಂತೆ ಒಟ್ಟು 54 ಅರ್ಜಿಗಳು ಸಲ್ಲಿಕೆಯಾದವು.
ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಸರ್ವೇ ಸೂಪರ್‌ವೈಸರ್ ಷಡಕ್ಷರಿ, ಇಡಿಆರ್‌ಎಲ್ ಲೋಕೇಶ್, ಚುನಾವಣಾ ಶಿರಸ್ತೇದಾರ್ ಅನಿಲ್, ರಾಜಸ್ವ ನಿರೀಕ್ಷಕ ಎಂ.ಆರ್.ಮಂಜುನಾಥ್, ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರಘುಪತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.