ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಮೆಂಟ್ ಮಂಜು, ಸುಬ್ರಹ್ಮಣ್ಯ ಶರ್ಮ, ಎ.ಜೆ.ಕೃಷ್ಣೇಗೌಡ, ಎಂ.ಎಸ್. ಮಹೇಶ್ ಇತರರಿದ್ದರು. Students need to be aware of Legislative Assembly proceedings.
ಹಾಸನ

ವಿದ್ಯಾರ್ಥಿಗಳಿಗೆ ವಿಧಾನಸಭೆ ಕಲಾಪಗಳ ಅರಿವು ಅಗತ್ಯ

ಶಾಸಕ ಸಿಮೆಂಟ್ ಮಂಜು ಅಭಿಮತ

ಆಲೂರು: ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂಸತ್ ಕಲಾಪ ಹೇಗೆ ನಡೆಯುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡುವುದೇ ಯುವ ಸಂಸತ್‌ಸ್ಪರ್ಧೆಯ ಉದ್ದೇಶ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಪಟ್ಟಣದ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಸತ್-2026 ಕಾರ್ಯಕ್ರಮದಲ್ಲಿ ಮಾತನಾಡಿದರು. ಪುಸ್ತಕದ ಜ್ಞಾನದ ಜತೆಗೆ ಪ್ರಾತ್ಯಕ್ಷಿಕೆ ಮೂಲಕ ಕಲಿತರೆ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಶಾಲಾ ಹಂತದಲ್ಲಿಯೇ ಚುನಾವಣೆ ವ್ಯವಸ್ಥೆ ಹಾಗೂ ವಿಧಾನಸಭೆಯಲ್ಲಿ ನಡೆಯುವ ಕಲಾಪಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. 18 ವರ್ಷ ತುಂಬಿದ ಬಳಿಕ ನೀವೇ ಮತದಾರರಾಗುತ್ತೀರಿ. ಮುಂದೆ ಚುನಾಯಿತ ಪ್ರತಿನಿಧಿಗಳಾಗುವ ಅವಕಾಶವೂ ನಿಮಗಿದೆ ಎಂದರು.

ತಹಸೀಲ್ದಾರ್ ಎಚ್. ಮಲ್ಲಿಕಾರ್ಜುನ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸಂವಿಧಾನದ ಆಶಯದಂತೆ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ ಗೆದ್ದ ಶಾಸಕರು ಮುಖ್ಯಮಂತ್ರಿ ಹಾಗೂ ಸಚಿವರಾಗುತ್ತಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖಂಡರೂ ಇರುತ್ತಾರೆ. ಈ ಎಲ್ಲ ವಿಚಾರಗಳ ಬಗ್ಗೆ ಯುವ ಸಂಸತ್ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾನವ ಮತ್ತು ಪ್ರಾಣಿ ಸಂಘರ್ಷ, ಬರ ಪರಿಸ್ಥಿತಿ ನಿರ್ವಹಣೆ, ಸಾಧಕ ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತು ಚರ್ಚಿಸಿದರು. ಆಲೂರು ತಾಲೂಕಿಗೆ ಸಂಬಂಧಿಸಿದ ಸಮಸ್ಯೆಗಳು, ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಮುಂದಿಟ್ಟುಕೊಂಡು ಕಲಾಪ ನಡೆಸಿದರು.

ತಾಪಂ ಇಒ ಸುಬ್ರಹ್ಮಣ್ಯ ಶರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್ ಇತರರಿದ್ದರು.