ಶಾಸಕ ಸಿಮೆಂಟ್ ಮಂಜು ದೇವಿಯ ಪಾದಮುಟ್ಟಿ ನಮಸ್ಕರಿಸಿದರು. ದೇಗುಲ ದಾಸೋಹ ಸಮಿತಿ ಅಧ್ಯಕ್ಷ ರಘು ಗೋಪಾಲ್ ಮತ್ತಿತರರಿದ್ದರು. 
ಹಾಸನ

ವಿಜೃಂಭಣೆಯ ಶ್ರೀಕೆಂಚಾಂಬಿಕೆ ದೇವಿ ಚಿಕ್ಕ ಜಾತ್ರೆ

ಸುತ್ತಮುತ್ತಲಿನ 48 ಹಳ್ಳಿಗಳ ಭಕ್ತರು ಭಾಗಿ

ಆಲೂರು: ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀಕೆಂಚಾಂಬಿಕೆ ದೇವಿ ಚಿಕ್ಕ ಜಾತ್ರೆ ಭಾನುವಾರ ಸುತ್ತಮುತ್ತಲಿನ 48 ಹಳ್ಳಿಗಳ ಭಕ್ತರೊಂದಿಗೆ ವಿಜೃಂಭಣೆಯಿಂದ ಜರುಗಿತು.

ಹಾಸನಾಂಬ ದೇವಸ್ಥಾನದ ಬಾಗಿಲು ಹಾಕಿದ ನಂತರ ಪುರಾತನ ಸಂಪ್ರದಾಯದಂತೆ ಈ ವರ್ಷವೂ ಶನಿವಾರ ಶ್ರೀ ಕೆಂಚಾಂಬಿಕೆ ದೇವಿ ಜಾತ್ರೆ ಉತ್ಸವಗಳು ಪ್ರಾರಂಭವಾಗಿ ಭಾನುವಾರ ಪೂಜಾ ಕೈಂಕರ್ಯಗಳೊಂದಿಗೆ ಮುಕ್ತಾಯಗೊಂಡಿತು.

ಶಾಸಕ ಸಿಮೆಂಟ್ ಮಂಜು ಹಾಗೂ ಮಾಜಿ ಸಚಿವ ಎಚ್ ಕೆ.ಕುಮಾರಸ್ವಾಮಿ, ಜಿಲ್ಲಾ ಸಂಸದ ಶ್ರೇಯಸ್ ಪಟೇಲ್, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ, ದೇವಸ್ಥಾನದ ಪ್ರಧಾನ ಅರ್ಚಕ ಎಚ್.ಎನ್.ರಾಮಸ್ವಾಮಿ ಕುಟುಂಬ ಸದಸ್ಯರಾದ ಸತ್ಯನಾರಾಯಣ್ ಹಾಗೂ ದೇವಾಲಯದ ದಾಸೋಹ ಸಮಿತಿ ಅಧ್ಯಕ್ಷ ಗೋಪಾಲ(ರಘು) ಸೇರಿದಂತೆ ಹಲವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿದರು.

ಕೆಂಚಮ್ಮನ ಹೊಸಕೋಟೆ, ಕುಂದೂರು ಹೋಬಳಿ ಹಾಗೂ ಪಾಳ್ಯ ಹೋಬಳಿಗೆ ಹಾಗೂ ಕೊಡಗು ಜಿಲ್ಲೆಗೆ ಸೇರಿದ ಸುತ್ತಮುತ್ತಲಿನ ಸುಮಾರು 48 ಹಳ್ಳಿಗಳ ಅಧಿದೇವತೆಯಾಗಿರುವ ಕೆಂಚಾಂಬ ದೇವಿ ಉತ್ಸವದ ಮೊದಲ ದಿನವಾದ ಶನಿವಾರ ರಾತ್ರಿ ಮೂಲ ದೇವಸ್ಥಾನದಲ್ಲಿ ದೇವಿಯ ಏಳು ಮುಖಗಳುಳ್ಳ ಮೂರ್ತಿಗಳಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಣಿ, ಇಂದ್ರಾಣಿ, ಚಾಮುಂಡಿ ದೇವಿಯರಿಗೆ ಸಪ್ತಮಾತೃಕೆಯರ ಅಲಂಕಾರ ಮಾಡಿ ಮಹಾ ಮಂಗಳಾರತಿ ಬೆಳಗುವ ಮೂಲಕ ಜಾತ್ರಾ ಪೂಜಾ ಕೈಂಕರ್ಯಗಳನ್ನು ವಿಧ್ಯುಕ್ತವಾಗಿ ಆರಂಭಿಸಲಾಯಿತು.

ಈ ಸಮಯದಲ್ಲಿ ಶ್ರೀಚಾಮುಂಡೇಶ್ವರಿ ದೇವಿಯ ಸಮಾಗಮನವನ್ನು ನೋಡಬಹುದಾಗಿದ್ದು, ನಂತರ ದೇವಾಲಯ ಆವರಣದಲ್ಲಿರುವ ಸುಗ್ಗಿ ಕಟ್ಟೆ ಮುಂದೆ ವಿಶೇಷ ಪೂಜೆ ನೆರವೇರಿಸಿದ ನಂತರ ಜನರು ಸುಗ್ಗಿ ಕಟ್ಟೆ ಮುಂದೆ ಕುಣಿದು ಸಂಭ್ರಮಿಸಿದರು.

ಉತ್ಸವಮೂರ್ತಿ ಮೆರವಣಿಗೆ:

ಭಾನುವಾರ ಮೂಲ ದೇವಸ್ಥಾನದಿಂದ ಉತ್ಸವ ಮೂರ್ತಿಯೊಂದಿಗೆ ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಶ್ರೀಕೆಂಚಾಂಬ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತರಲಾಯಿತು. ಮೆರವಣಿಗೆಯಲ್ಲಿ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ, ಈಡುಗಾಯಿ ಒಡೆದರು.

ಮೆರವಣಿಗೆ ದೇವಸ್ಥಾನದ ಬಳಿ ಬಂದ ನಂತರ ಹುತ್ತದ ರೂಪದಲ್ಲಿರುವ ಕೆಂಚಾಂಬ ದೇವಿಗೆ ಒಡವೆಗಳನ್ನು ಧರಿಸಿ ಪೂಜಾ ವಿಧಿ ವಿಧಾನಗಳು ಜರುಗಿದವು. ಮಹಾ ಮಂಗಳಾರತಿ ನೆರವೇರಿಸಿ ಬಲಿ ಪ್ರದಾನ ಮಾಡಲಾಯಿತು. ನಂತರ ಶ್ರೀ ವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಚಾಂಬ ದೇವಿಯ ಬೆಳ್ಳಿ ಪಾದದೊಂದಿಗೆ ವಾದ್ಯಗೋಷ್ಠಿಯಲ್ಲಿ ಕರೆತಂದು ಕೆಂಡೋತ್ಸವ ನಡೆಸಲಾಯಿತು. ಭಕ್ತರಿಗೆ ದೇವಿ ಪಾದ ಮುಟ್ಟಿ ನಮಸ್ಕರಿಸಲು ರಾತ್ರಿ 11 ಗಂಟೆವರೆಗೂ ಅವಕಾಶ ಕಲ್ಪಿಸಲಾಗಿತ್ತು.

21ರವರೆಗೆ ದೇವಸ್ಥಾನದ ಬಾಗಿಲು ಬಂದ್:

ಪುರಾತನ ಸಂಪ್ರದಾಯದಂತೆ ನ.16ರಿಂದ ನ.21ರವರೆಗೂ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ. ನ.21ರಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಅಂದು ಬಾಗಿಲು ತೆರೆಯುವ ಜಾತ್ರೆ ನಡೆಸಲಾಗುತ್ತದೆ.