ವಕೀಲರ ಮೇಲಿನ ಹಲ್ಲೆ ಹಾಗೂ ದೌರ್ಜನ್ಯ, ಕೊಲೆ ಯತ್ನದಂತಹ ಘಟನೆಗಳನ್ನು ತಡೆಗಟ್ಟಲು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೆ ಆಗ್ರಹಿಸಿ ನ್ಯಾಯಾಲಯದ ಮುಂದೆ ಪ್ರತಿಭಟಿಸಿದ ವಕೀಲರು. 
ಹಾಸನ

ವಕೀಲರ ಸಂರಕ್ಷಣಾ ಕಾಯ್ದೆ ಸಮರ್ಪಕ ಜಾರಿಗೆ ಒತ್ತಾಯ

ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಬೇಲೂರಿನಲ್ಲಿ ಅಡ್ವೊಕೇಟ್‌ಗಳ ಪ್ರತಿಭಟನೆ

ಬೇಲೂರು: ವಕೀಲರ ಮೇಲಿನ ಹಲ್ಲೆ, ದೌರ್ಜನ್ಯ, ಕೊಲೆ ಯತ್ನದಂತಹ ಘಟನೆಗಳನ್ನು ತಡೆಗಟ್ಟಲು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬೇಲೂರಿನಲ್ಲಿ ವಕೀಲರು ಜೆಎಂಎಫ್‌ಸಿ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಮಂಗಳವಾರ ಪ್ರತಿಭಟಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ನಟರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ಆತಂಕಕಾರಿಯಾಗಿವೆ. ಬೆಂಗಳೂರಿನ ವೈಟ್‌ಫೀಲ್ಡ್ ವಕೀಲ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್‌ರ ಬರ್ಬರ ಹತ್ಯೆ, ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕ್ಕಿ ಮೇಲಿನ ಕೊಲೆ ಯತ್ನದ ಘಟನೆ ಖಂಡನೀಯ. ವಕೀಲರು ತಮ್ಮ ವೃತ್ತಿ ಮತ್ತು ಕರ್ತವ್ಯಗಳನ್ನು ಯಾವುದೇ ಭಯವಿಲ್ಲದೆ ನಿರ್ವಹಿಸಲು ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು. ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಿ ವಕೀಲರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಕೀಲ ಸೋಮೇಗೌಡ ಮಾತನಾಡಿ, ವಕೀಲರ ಮೇಲಿನ ಹಲ್ಲೆ ತಡೆಗಟ್ಟಲು ಈಗಾಗಲೇ ಜಾರಿಯಲ್ಲಿರುವ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತ್ಯಗತ್ಯ. ವಕೀಲರ ಮೇಲೆ ಹಲ್ಲೆ ನಡೆದ ಸಂದರ್ಭ ಸಂಬಂಧಪಟ್ಟ ಕಾಯ್ದೆಯ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸದಿರುವುದು ಕಾಯ್ದೆಯ ಉದ್ದೇಶ ಈಡೇರದಿರಲು ಪ್ರಮುಖ ಕಾರಣ. ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಹೊರಬರುವ ಸ್ಥಿತಿ ಬದಲಾಗಬೇಕು. ಇಂತಹ ಗಂಭೀರ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಂಡರೆ ವಕೀಲರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದರು.

ವಕೀಲರಾದ ಚಂದ್ರೇಗೌಡ, ಸಿ.ಎಂ.ಪೃಥ್ವಿ, ರತೀಶ್, ಚಂದ್ರೇಗೌಡ, ಪುಟ್ಟಸ್ವಾಮಿಗೌಡ, ಮಂಜುನಾಥ್, ತಮ್ಮಣ್ಣಗೌಡ, ಶ್ರೀನಿಧಿ, ಕುಮಾರ್, ಚಂದ್ರ ಇತರರಿದ್ದರು.