ಆಲೂರು: ಕಷ್ಟ ಎಂದು ಬೇಡಿ ಬರುವ ಭಕ್ತರಿಗೆ ದಯೆ ತೋರಿ ಇಷ್ಟಾರ್ಥ ಈಡೇರಿಸುವ ಮೂಲಕ ಮಲ್ಲಾಪುರ ಗ್ರಾಮದ ಶ್ರೀ ಬಲಮುರಿ ಗಣೇಶ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾನೆ.
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಮಲ್ಲಾಪುರದಲ್ಲಿ ನೆಲೆನಿಂತಿರುವ ಗಣೇಶ ಭಕ್ತಿಯಿಂದ ಬೇಡಿ ಬರುವವರ ಕಷ್ಟಗಳನ್ನು ಕಳೆಯುತ್ತಿದ್ದಾನೆ. ಕೊಟ್ಟ ಮಾತನ್ನು ಗಣೇಶ ತಪ್ಪಲ್ಲ ಎಂಬುದು ಭಕ್ತರ ಬಲ ಮತ್ತು ಅಚಲವಾದ ನಂಬಿಕೆ.
ಜಿಲ್ಲೆಯ ಜೀವನದಿ ಹೇಮಾವತಿ ತಟದಲ್ಲಿರುವ ಹಚ್ಚ ಹಸಿರಿನ ಪರಿಸರದ ಮಧ್ಯೆ ಈ ದೇವಾಸ್ಥಾನವಿದೆ. ಹಾಸನ, ಸಕಲೇಶಪುರ ಕೊಡಗಿನ ಕೊಡ್ಲಿಪೇಟೆಯ ನೂರಾರು ಭಕ್ತರು ಪ್ರತಿದಿನ ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ಚೌತಿ, ದಶಮಿ, ಏಕಾದಶಿ ದಿನಗಳಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ವಿನಾಯಕ ಚೌತಿ, ನವರಾತ್ರಿ, ಕಾರ್ತಿಕ ಮಾಸ, ಸಂಕ್ರಾಂತಿಯಲ್ಲಿ ಪ್ರಭಾ ಹಬ್ಬ ಮತ್ತು ಶಿವರಾತ್ರಿಯಂದು ವಿಶೇಷ ಅರ್ಚನೆ ನೆರವೇರುತ್ತದೆ.
ತಲುಪುವ ಮಾರ್ಗ
ಹಾಸನ ಜಿಲ್ಲಾ ಕೇಂದ್ರದಿಂದ 40 ಕಿಲೋಮೀಟರ್ ಸಕಲೇಶಪುರದಿಂದ 25, ಕೊಡಗಿನ ಕೊಡ್ಲಿಪೇಟೆಯಿಂದ 11 ಕಿಲೋಮೀಟರ್ ದೂರದಲ್ಲಿ ಬಲಮರಿ ಗಣಪತಿ ದೇವಸ್ಥಾನವಿದೆ.
ದೇವಾಲಯದ ಇತಿಹಾಸ
ಉದ್ಯಮಿಯೊಬ್ಬರು ಬೆಂಗಳೂರಿನಿಂದ ಕೆಂಚಮ್ಮನ ಹೊಸಕೋಟೆ ಭಾಗದಲ್ಲಿ ಕಲ್ಲಿನ ವ್ಯಾಪಾರಕ್ಕಾಗಿ ಸರ್ಕಾರದಿಂದ ಅನುಮತಿ ಪಡೆದು ಬಂದು ಜೆಲ್ಲಿ, ಸೈಜುಗಲ್ಲು, ಕಲ್ಲಿನ ಕಂಬಗಳು ಸೇರಿದಂತೆ ಇನ್ನಿತರ ಉತ್ಪನ್ನ ತಯಾರಿಸಿ ವ್ಯಾಪಾರ ನಡೆಸಲು ಮುಂದಾಗುತ್ತಾರೆ. ಆದರೆ, ಗ್ರಾಹಕರು ಬರುತ್ತಿರಲಿಲ್ಲ. ಆಗ ವ್ಯಾಪಾರಿ ಇಲ್ಲಿ ಏನೋ ತೊಡಕಿದೆ ಮಾಡಿದ ಕೆಲಸ ವಿಘ್ನವಾಗುತ್ತಿದೆ ಎಂಬುದನ್ನು ಅರಿತು, ಸ್ಥಳೀಯರಾದ ಶಿವಪ್ರಸನ್ನ ಮತ್ತು ಗುರುಸ್ವಾಮಿ ಕೇಳಿದಾಗ ಉಪಾಯ ಸೂಚಿಸುತ್ತಾರೆ.
ಅಂತೆಯೇ ಆ ಉದ್ಯಮಿ ಅಂದೇ ಒಂದು ಸಂಕಲ್ಪ ಮಾಡಿ ಕಲ್ಲೊಂದನ್ನು ಆಯ್ಕೆ ಮಾಡಿ ಅದನ್ನು ತೆಗೆದಿಟ್ಟು ಕಾಯಕ ಮುಂದುವರಿಸುತ್ತಾರೆ. ಆಶ್ಚರ್ಯವೆಂದರೆ ಕೆಲವೇ ಸಮಯದಲ್ಲಿ ಗ್ರಾಹಕರು ನಾಮುಂದು ತಾಮುಂದು ಎಂದು ಬರತೊಡಗುತ್ತಾರೆ. ಗ್ರಾಹಕರೇ ಬರದಿದ್ದ ಸ್ಥಳ ಅದೊಂದು ಕಲ್ಲು ತೆಗೆದಿರಿಸಿದ ನಂತರ ಎಷ್ಟೊಂದು ಬದಲಾವಣೆಯಾಯಿತೆಂದು ಉದ್ಯಮಿ ಆಶ್ಚರ್ಯಕ್ಕೊಳಗಾಗುತ್ತಾರೆ. ಕಡೆಗೆ ತೆಗೆದಿಟ್ಟ ಕಲ್ಲಿಗೆ ಶಿಲ್ಪರೂಪ ಕೊಡುವ ತಯಾರಿ ಆರಂಭವಾಗುತ್ತದೆ. ಹೇಗೆ, ಎಲ್ಲಿ ಸ್ಥಾಪನೆ, ಇದರ ಉಸ್ತುವಾರಿ ಯಾರು.? ಸಾಕಷ್ಟು ಪ್ರಶ್ನೆಗಳ ನಂತರ ಪರಿಹಾರೋಪಾಯಗಳೂ ನಡೆದು ತ್ವರಿತ ಕಾರ್ಯಾಚರಣೆಯಲ್ಲಿ ನೂತನ ಮಂಟಪ ದೇವಾಲಯವಾಗಿ ಪರಿವರ್ತನೆಯಾಗುತ್ತದೆ ಎಂಬುದು ಈಗ ಇತಿಹಾಸ. ನಂತರ ಊರ ಮುಂದೆ ಕಲ್ಲಿನ ಮಂಟಪವೊಂದು ನಿರ್ಮಾಣವಾಗುತ್ತದೆ. ಮೂರ್ನಾಲ್ಕು ಗ್ರಾಮಗಳ ದೇವರ ಉತ್ಸವಗಳು, ಪಲ್ಲಕ್ಕಿ, ನಂದಿಧ್ವಜಗಳ ಮೆರವಣಿಗೆ ಸೇರಿದಂತೆ ವಿಜಯದಶಮಿಯಂದು ದೊಡ್ಡ ಉತ್ಸವಗಳು ಈ ಸ್ಥಳದಲ್ಲಿ ಆರಂಭವಾಗುತ್ತದೆ.
ನಮಗಿದ್ದ ವಿಘ್ನಗಳನ್ನು ನಿವಾರಿಸುವ ಶಕ್ತಿ ಈ ಕಲ್ಲಿಗೆ ಇದೆ ಎಂದು ಭಾವಿಸಿ ಗಣಪತಿಯ ವಿಗ್ರಹವನ್ನು ಈ ಕಲ್ಲಿನಿಂದಲೇ ನಿರ್ಮಿಸಬೇಕೆಂದು ಸ್ಥಳೀಯರು ಸರ್ವಾನುಮತದ ತೀರ್ಮಾನಿಸುತ್ತಾರೆ/ ಬಳಿಕ ಆ ಕಲ್ಲನ್ನು ಶಿಲೆಯಾಗಿ ಪರಿವರ್ತಿಸಿ ಕೆತ್ತನೆ ಮಾಡಿ ಬಲಮುರಿ ಗಣಪತಿ ವಿಗ್ರಹವಾಗಿ ರೂಪುಗೊಳಿಸಲಾಗುತ್ತದೆ. 1993ರಲ್ಲಿ ವಿರಾಜಮಾನವಾಗಿ ದೇವಾಲಯದ ಉಸ್ತುವಾರಿಯಾಗಿ ವಿಠ್ಠಲ ಗೌಂಡರ ಅವರು ನೇಮಕವಾಗುತ್ತಾರೆ.
ಬಲಮುರಿ ಗಣಪತಿ ನಮ್ಮ ಗ್ರಾಮದ ಆರಾಧ್ಯ ದೇವರಾಗಿದ್ದು, ಗಣಪತಿಯ ಭಕ್ತಿ, ಮಹಿಮೆ ಮೆಚ್ಚಿ ನಿತ್ಯ ಇಲ್ಲಿ ಸಂಚಾರ ಮಾಡುವ ಜಿಲ್ಲೆ ಹಾಗೂ ಹೊರ ರಾಜ್ಯಗಳ ಭಕ್ತರು ಗಣಪತಿ ದೇವರ ದರ್ಶನ ಪಡೆದು ಮುಂದೆ ಸಾಗುತ್ತಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗಣಪತಿ ರೋಗ-ರುಜಿನಗಳು ಬಾರದಂತೆ ಊರನ್ನು ಕಾಪಾಡಿ ಭಕ್ತರನ್ನು ಹರಸುತ್ತಿದೆ.
> ಭಾಸ್ಕರ್ ಭಕ್ತ
ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಿಯೂ ಬಲಮುರಿ ಗಣೇಶ ದೇವಾಲಯ ಇಲ್ಲ. ಸಂಕಷ್ಟಹರ ಗಣಪತಿ ಪೂಜೆ ಇಲ್ಲಿನ ವಿಶೇಷ, ಪ್ರತಿ ತಿಂಗಳೂ ನಡೆಯುತ್ತದೆ. ಭಕ್ತರ ವಿಘ್ನ ನಾಶಕಾರಿ ಬಲಮುರಿ ಗಣೇಶ ಎಂಬ ಪ್ರಖ್ಯಾತಿಯಿದೆ. ಗರಿಕೆ ಅರ್ಪಿಸಿ ಪೂಜಿಸಿದರೂ ಪ್ರಸನ್ನನಾಗುವನೆಂಬ ನಂಬಿಕೆಯಿದೆ. ಯಾವುದೇ ಸಮಸ್ಯೆ ಇದ್ದರೂ ಕೂಡ ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ ಕೋರಿಕೆಯನ್ನು ಸಲ್ಲಿಸಿ ಬಂದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
> ನರಹರಿಭಟ್ಟರು ಪ್ರಧಾನ ಅರ್ಚಕ, ಬಲಮುರಿ ಗಣಪತಿ ದೇವಾಲಯ
ರೋಗ-ರುಜಿನಗಳ ನಿವಾರಣೆ ಮತ್ತು ಸಂತಾನ ಪ್ರಾಪ್ತಿಗಾಗಿ ಬಲಮುರಿ ಗಣಪತಿ ದೇವಸ್ಥಾನಕ್ಕೆ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಭಕ್ತಿಯಿಂದ ಸ್ವಾಮಿಯ ಆರಾಧನೆ ಮಾಡಿದರೆ ರೋಗಗಳು ನಿವಾರಣೆಯಾಗಿ, ವಂಶಾಭಿವೃದ್ಧಿ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಇದು ಹಿಂದಿನಂದಿಲೂ ನಡೆದು ಬಂದಿದ್ದು, ಈ ಸ್ಥಳ ಅತ್ಯಂತ ಪ್ರಶಸ್ತವಾದುದು.
> ವಿವೇಕ್ ವೈದ್ಯನಾಥ್ ಕೆಂಚಮ್ಮನ ಹೊಸಕೋಟೆ ಹೋಬಳಿ ಅಧ್ಯಕ್ಷ, ಕರವೇ