ಹೊಳೆನರಸೀಪುರ ತಾಲೂಕಿನ ಕಸಬಾ ಹೋಬಳಿಯ ಮೂಡಲ ಹಿಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಆಗಮಿಸಿದ ಸಾರ್ವಜನಿಕರು. ಶಾಸಕ ಎಚ್.ಡಿ.ರೇವಣ್ಣ, ತಹಸೀಲ್ದಾರ್ ರೇಣುಕುಮಾರ್ ಇದ್ದರು. 
ಹಾಸನ

ರೈತರಿಗೆ ಶೀಘ್ರ ಬರ ಪರಿಹಾರ ನೀಡಿ

ಶಾಸಕ ಎಚ್.ಡಿ.ರೇವಣ್ಣ ಆಗ್ರಹ

ಹೊಳೆನರಸೀಪುರ: ನೀರಿಲ್ಲದೆ ರೈತರ ಬೆಳೆಗಳು ನಾಶವಾಗಿದ್ದು, ಸರ್ಕಾರ ಬೆಳೆ ಪರಿಹಾರ ಶೀಘ್ರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರ ಪರವಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಚ್.ಡಿ.ರೇವಣ್ಣ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ತಾಲೂಕಿನ ಮೂಡಲಹಿಪ್ಪೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿ ಮಿಸ್ಸಿಂಗ್ ಫೈಲ್ (ಜಮೀನು ದುರಸ್ತಿ ಫೈಲ್)ಗಳ ಬಗ್ಗೆ ಯಾವುದೇ ಮೀಟಿಂಗ್ ಮಾಡುತ್ತಿಲ್ಲ. ಹೊಳೆನರಸೀಪುರ ತಾಲೂಕಿನ ಜಮೀನು ದುರಸ್ತಿ ಫೈಲ್‌ಗಳು 2-3 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಉಳಿದಿದ್ದು, ವಿಲೇವಾರಿ ಆಗುತ್ತಿಲ್ಲ. ಮೂರು ತಿಂಗಳಿಗೊಮ್ಮೆ ಡಿಸಿ ಸಭೆ ಮಾಡಿ ಮಿಸ್ಸಿಂಗ್ ಫೈಲ್‌ಗಳನ್ನು ಇತ್ಯರ್ಥಗೊಳಿಸಬೇಕಾಗಿತ್ತು. ಆದರೆ ಯಾವುದನ್ನು ಮಾಡುತ್ತಿಲ್ಲ. ಇಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ. ಇದಕ್ಕೆ ಪ್ರಜಾಸೇವೆ ಮೀಟಿಂಗ್ ಬೇರೆ ಮಾಡಬೇಕಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಹಿರಿಯರಿಗೆ ಪಿಂಚಣಿ ಬರುತ್ತಿಲ್ಲ. ಇನ್ನು ಒಂದು ತಿಂಗಳ ಒಳಗಾಗಿ ಸಂಬಂಧಿಸಿದ ಎಲ್ಲರ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ಸದರಿ ಖಾತೆಗೆ ಹಣ ಸಂದಾಯ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.

ತಾಲೂಕಿನ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕರ ಉಪಸ್ಥಿತಿಯಲ್ಲಿ ತಹಸೀಲ್ದಾರ್ ಅವರು ಸಾರ್ವಜನಿಕರಿಂದ ಸಮಸ್ಯೆಗಳ ಅಹವಾಲು ಸ್ವೀಕರಿಸಿದರು. ಒಟ್ಟು 7 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಂದಾಯ ಜಮೀನಿಗೆ ಸಂಬಂಧಿಸಿದ ಇಲಾಖೆ 2, ಪಂಚಾಯತ್ ರಾಜ್ ಇಲಾಖೆ 3, ವಿದ್ಯುತ್ ಇಲಾಖೆ 1, ಲೋಕೋಪಯೋಗಿ ಇಲಾಖೆ 1 ಅರ್ಜಿ ಸಲ್ಲಿಕೆಯಾದವು.

ಒಂದು ವಾರದೊಳಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಶಾಸಕ ಎಚ್.ಡಿ.ರೇವಣ್ಣ ಸೂಚಿಸಿದರು.

ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ಒಂದೇ ಸೂರಿನಡಿ ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಜಾರಿಗೆ ತಂದಿದೆ. ಇದರ ಅಂಗವಾಗಿ ತಾಲೂಕು ಆಡಳಿತ ವತಿಯಿಂದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಜಾಸೇವೆ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಹಾಗೂ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.