ಶಾಸಕ ಎಚ್.ಡಿ.ರೇವಣ್ಣ  MLA H.D. Revanna
ಹಾಸನ

ರೈತರ ಕೃಷಿ ಭೂಮಿಗೆ ನೀರು ತಲುಪುವವರೆಗೂ ಹೋರಾಟ

The struggle will continue until water reaches the farmers' agricultural land.

ಹೊಳೆನರಸೀಪುರ: ರೈತರ ಹಿತ ಕಾಯುವುದೇ ನನ್ನ ಮೊದಲ ಆದ್ಯತೆಯಾಗಿದ್ದು, ನನ್ನ ಕ್ಷೇತ್ರದಲ್ಲಿ ರೈತರ ಕೃಷಿ ಭೂಮಿಗೆ ನೀರು ತಲುಪಿಸಲು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ತಾಲೂಕಿನ ಏತ ನೀರಾವರಿ ಹಾಗೂ ನಾಲೆಗಳ ನಿರ್ವಹಣೆಯಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಕಳೆದ ಎರಡೂವರೆ-ಮೂರು ವರ್ಷಗಳಿಂದ ತಟ್ಟೆಕೆರೆ, ಮೂಡ್ಲಿಪ್ಪೇ ಗೊಂದಿ ಮಲೆನಹಳ್ಳಿ, ಜಕ್ಕವಳ್ಳಿ, ಜಕ್ಕವಳ್ಳಿ ಕೊಪ್ಪಲು, ಲಕ್ಷ್ಮೀಪುರ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯ ಕೃಷಿ ಜಮೀನುಗಳಿಗೆ ಒಂದು ಹನಿ ನೀರು ಹರಿದಿಲ್ಲ. ಅಧಿಕಾರಿಗಳು ನಾಲೆಗಳಲ್ಲಿ ಹೂಳೆತ್ತುವ (ಸಿಲ್ಟ್) ಕೆಲಸವನ್ನೂ ಮಾಡಿಲ್ಲ. ಸ್ವತಃ ನಾನೇ ನಾಲೆಗಳ ಬಳಿ ತೆರಳಿ ಜೆಸಿಬಿ ಯಂತ್ರಗಳಿಂದ ಗಿಡ-ಗಂಟಿಗಳನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿದ್ದೇನೆ. ಸರ್ಕಾರದ ಅನುದಾನವಿಲ್ಲದಿದ್ದರೂ ಸ್ವಂತ ಮುತುವರ್ಜಿಯಿಂದ ಹಿಟಾಚಿ ತರಿಸಿ ಕಾಮಗಾರಿ ಮಾಡಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದ್ದರೂ ರೈತರಿಗೆ ಸಿಕ್ಕ ಪರಿಹಾರ ಶೂನ್ಯ. ಕೇವಲ ಘೋಷಣೆಗಳಿಗೆ ಸೀಮಿತವಾಗಿರುವ ಸರ್ಕಾರ, ಸಂಕಷ್ಟದಲ್ಲಿರುವ ಅನ್ನದಾತರಿಗೆ ಸೂಕ್ತ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.

ನನೆಗುದಿಗೆ ಬಿದ್ದ ನೀರಾವರಿ ಯೋಜನೆಗಳು:

ಎಚ್‌ಆರ್‌ಬಿಸಿ ನಾಲೆ, ತಟ್ಟೆಕೆರೆ ಏತ ನೀರಾವರಿ, ದುದ್ದ-ಶಾಂತಿಗ್ರಾಮ ವ್ಯಾಪ್ತಿಯ 160 ಕೆರೆ ತುಂಬಿಸುವ ಯೋಜನೆ, ಚಾಕೇನಹಳ್ಳಿ, ವಡ್ಡರಗುಡ್ಡ, ಕಾಮಸಮುದ್ರ ಮುಂತಾದ ಏತ ನೀರಾವರಿ ಯೋಜನೆಗಳ ಮೋಟಾರ್ ರಿಪೇರಿ, ಲೈನಿಂಗ್ ಹಾಗೂ ಭೂಸ್ವಾಧೀನದ ಕಡತಗಳು ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿಳಂಬವಾಗುತ್ತಿವೆ ಎಂದರು.

ಅಧಿಕಾರಿಗಳು ಸಭೆ-ಪರಿಶೀಲನೆಗಳಿಗೂ ಬಾರದೆ ನಿಷ್ಕ್ರಿಯರಾಗಿದ್ದಾರೆ. ಕಂದಾಯ ಹಾಗೂ ಜಲಸಂಪನ್ಮೂಲ ಇಲಾಖೆಯ ಈ ಲೋಪದೋಷಗಳ ಬಗ್ಗೆ ದಾಖಲೆ ಸಮೇತ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ವಿವರವಾಗಿ ಪತ್ರ ಬರೆಯುವುದಾಗಿ ರೇವಣ್ಣ ಸ್ಪಷ್ಟಪಡಿಸಿದರು.